ನವದೆಹಲಿ: ಜನಾಂಗೀಯ ಸಂಘರ್ಷದಿಂದ ಹೊತ್ತಿ ಉರಿಯುತ್ತಿರುವ ಮಣಿಪುರಕ್ಕೆ ಇಂದು ಮತ್ತು ನಾಳೆ ವಿಪಕ್ಷಗಳ ನಿಯೋಗ ಭೇಟಿ ನೀಡಲಿದೆ. ಇಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಬಳಿಕ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವ ಇರಾದೆ ಹೊಂದಿದೆ.
26 ವಿಪಕ್ಷಗಳು ಸೇರಿಕೊಂಡು ರಚಿಸಿಕೊಂಡಿರುವ ಇಂಡಿಯನ್ ನ್ಯಾಶನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ನ (ಇಂಡಿಯಾ) ಪೈಕಿ 16 ಪಕ್ಷಗಳ 20 ಸದಸ್ಯರ ನಿಯೋಗವು ಶನಿವಾರ ಮತ್ತು ಭಾನುವಾರ ಎರಡು ದಿನ ಮಣಿಪುರಕ್ಕೆ ಭೇಟಿ ನೀಡಲಿದೆ.
ಸಂಸದರ ನಿಯೋಗವು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಹಿಂಸಾಚಾರಕ್ಕೆ ಗುರಿಯಾದ ಜನರೊಂದಿಗೆ ಸಂವಾದ ನಡೆಸಲಿದೆ. ಸಂತ್ರಸ್ತರಿಗೆ ಧೈರ್ಯ ತುಂಬಲು ವಿರೋಧ ಪಕ್ಷದ ಸಂಸದರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಅವರ ಸ್ಥಿತಿಗತಿ ವಿಚಾರಿಸಲಿದ್ದಾರೆ. ಬಳಿಕ ಭಾನುವಾರದಂದು ರಾಜ್ಯಪಾಲರನ್ನು ಭೇಟಿ ಮಾಡಲು ಪ್ರತಿಪಕ್ಷಗಳ ನಿಯೋಗ ನಿರ್ಧರಿಸಿದೆ.
ನಿಯೋಗದಲ್ಲಿರುವ ಸಂಸದರು: ಸಂಸದರ ನಿಯೋಗದಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ರಾಜೀವ್ ರಂಜನ್ ಲಾಲನ್ ಸಿಂಗ್, ಕನಿಮೋಳಿ ಕರುಣಾನಿಧಿ, ಸುಶ್ಮಿತಾ ದೇವ್, ಸಂತೋಷ್ ಕುಮಾರ್, ಎಎ ರಹೀಮ್, ಪ್ರೊ ಮನೋಜ್ ಕುಮಾರ್ ಝಾ, ಮಹುವಾ ಮಜಿ, ಜಾವೇದ್ ಅಲಿ ಖಾನ್, ಪಿಪಿ ಮೊಹಮ್ಮದ್ ಫೈಜಲ್, ಅನೀಲ್ ಪ್ರಸಾದ್ ಹೆಗ್ಡೆ, ಇಟಿ ಮೊಹಮ್ಮದ್ ಬಶೀರ್, ಎನ್‌ಕೆ ಪ್ರೇಮಚಂದ್ರನ್, ಸುಶೀಲ್ ಗುಪ್ತಾ, ಡಿ ರವಿಕುಮಾರ್, ಅರವಿಂದ್ ಸಾವಂತ್, ತಿರು ತೋಲ್ ತಿರುಮಾವಲವನ್, ಜಯಂತ್ ಸಿಂಗ್ ಮತ್ತು ಫುಲೋ ದೇವಿ ನೇತಮ್ ಇರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದೇ ವೇಳೆ, ಲೋಕಸಭೆಯ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಅವರು ಮಣಿಪುರ ಜನಾಂಗೀಯ ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಮನವಿ ಮಂಡಿಸಿದ್ದಾರೆ. ಇದಕ್ಕೂ ಮೊದಲು ಅವರು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿಶ್ವಾಸವಿಲ್ಲ ಎಂದು ಅವಿಶ್ವಾಸ ನಿಲುವಳಿ ಮಂಡನೆ ಮಾಡಿದ್ದಾರೆ. ಅದನ್ನು ಸ್ಪೀಕರ್ ಓಂ ಬಿರ್ಲಾ ಅವರು ಸ್ವೀಕರಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ನಿಲುವಳಿ ಮಂಡನೆ ಬಗ್ಗೆ ಚರ್ಚೆಗೆ ದಿನಾಂಕ ನಿಗದಿಯಾಗಲಿದೆ.
ಸಂಸತ್ ಕಲಾಪ ಸತತ ಬಲಿ: ಇತ್ತ ಮಣಿಪುರ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಉತ್ತರ ನೀಡಬೇಕು ಎಂದು ಕೋರಿ ವಿಪಕ್ಷಗಳು ಪಟ್ಟು ಹಿಡಿದ ಕಾರಣ ಸಂಸತ್ ಕಲಾಪ ಸತತವಾಗಿ ಬಲಿಯಾಗುತ್ತಿದೆ. ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ವಿಪಕ್ಷಗಳು ಭಾರಿ ಗದ್ದಲ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಮೇ 3 ರಿಂದ ಆರಂಭವಾಗಿರುವ ಹಿಂಸಾಚಾರ ಈವರೆಗೂ 160 ಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ. ಪೊಲೀಸರು 6 ಸಾವಿರಕ್ಕೂ ಅಧಿಕ ಎಫ್ಐಆರ್ ದಾಖಲಿಸಿದ್ದಾರೆ. 40 ಸಾವಿರಕ್ಕೂ ಅಧಿಕ ಮಂದಿ ಸ್ಥಳಾಂತಗೊಂಡಿದ್ದಾರೆ.
ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಸಿದು ಬಿದ್ದ ವೃದ್ಧೆ.. ಪ್ರಾಥಮಿಕ ಚಿಕಿತ್ಸೆ ನೀಡಿದ ಡಿಸಿ