ರಾಯಪುರ (ಛತ್ತೀಸ್ಗಢ): ಸ್ವಕ್ಷೇತ್ರದ ಜನರ ವಿರುದ್ಧವೇ ಛತ್ತೀಸ್ಗಢ ಶಾಸಕಿ ಶಕುಂತಲಾ ಸಾಹು ವಾಗ್ದಾಳಿ ನಡೆಸಿದ್ದಾರೆ. ಇಷ್ಟು ದಿನ ಬೂಟ್ ನೆಕ್ಕಿದ್ದೀರಿ ಎಂದು ಶಾಸಕಿ ವಿವಾದಿತ ಹೇಳಿಕೆ ನೀಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಸ್ಡೋಲ್ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಶಾಸಕಿ ಶಕುಂತಲಾ ಸಾಹು, ತಮ್ಮ ಕ್ಷೇತ್ರದ ವ್ಯಾಪ್ತಿಯ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ಜನತೆ ಶಾಸಕಿಯ ವಿರುದ್ಧ ಧ್ವನಿ ಎತ್ತಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶಕುಂತಲಾ ಸಾಹು, ಜನರ ವಿರುದ್ಧವೇ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕ್ಷೇತ್ರದ ಹೊರಗಿನವರು ಇಲ್ಲಿಗೆ ಬಂದು ಶಾಸಕರಾಗುತ್ತಿದ್ದರು. ಆಗ ನೀವು ಪ್ರತಿಭಟಿಸಲಿಲ್ಲ. ಇಷ್ಟು ದಿನ ಅವರ ಬೂಟ್ ನೆಕ್ಕಿದ್ದೀರಿ. ಒಮ್ಮೆಯಾದರೂ ಹೊರಗಿನವರನ್ನು ವಿರೋಧಿಸಿದ್ದೀರಾ?. ಈಗ ನನ್ನನ್ನು ಯಾಕೆ ವಿರೋಧಿಸುತ್ತಿದ್ದೀರಿ ಎಂದು ಶಾಸಕಿ ಪ್ರಶ್ನೆ ಮಾಡಿದ್ದಾರೆ. ಶಕುಂತಲಾ ಸಾಹು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿ ವಾಗ್ದಾಳಿ ಮಾಡಿದ್ದು, ಜನತೆಯನ್ನು ಅವಮಾನಿಸಿದ್ದಾರೆ ಎಂದು ಟೀಕಿಸಿದೆ.
ಈ ಹಿಂದೆಯೂ ಶಾಸಕಿ ಶಕುಂತಲಾ ಸಾಹು ವಿವಾದಗಳಲ್ಲಿ ಸಿಲುಕಿದ್ದರು. ಐಪಿಎಸ್ ಅಂಕಿತಾ ಶರ್ಮಾ ಜೊತೆ ಅನುಚಿತವಾಗಿ ವರ್ತಿಸಿದ್ದ ಕುರಿತ ವಿಡಿಯೋ ಸಹ ವೈರಲ್ ಆಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಶಕುಂತಲಾ ಸಾಹು ಮೊದಲ ಬಾರಿಗೆ ಕಸ್ಡೋಲ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅಂದಿನ ಸ್ಪೀಕರ್ ಗೌರಿಶಂಕರ್ ಅಗರ್ವಾಲ್ ಅವರನ್ನು 50,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಗಮನ ಸೆಳೆದಿದ್ದರು.
ಇದನ್ನೂ ಓದಿ: ಅಲೋಕ್ ಕುಮಾರ್ ಯಾರು?.. ಪೊಲೀಸರ ಜೊತೆಗೆ ಶಾಸಕ ರೇಣುಕಾಚಾರ್ಯ ವಾಗ್ವಾದ ... ವಿಡಿಯೋ!