ಚೆನ್ನೈ(ತಮಿಳುನಾಡು): ತಮ್ಮ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರು ನೀಡಿದ್ದಕ್ಕಾಗಿ ದೂರು ನೀಡಿದ ವ್ಯಕ್ತಿಯ ಮೇಲೆಯೇ ಪೊಲೀಸರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಶಂಕರ್ ಎಂಬ ದಿವ್ಯಾಂಗ ವ್ಯಕ್ತಿ ಈ ಬಗ್ಗೆ ತಾವು ವಿಡಿಯೋ ಮಾಡಿ ಘಟನೆ ವಿವರಿಸಿದ್ದಾರೆ.
ಮಾರ್ಚ್ 15 ರಂದು ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದು ಹಾಗೂ ದೂರು ಸಂಬಂಧ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ನಡೆದಿದೆ ಎನ್ನಲಾದ ಘಟನೆಯನ್ನು ವಿವರಿಸಿದ್ದಾರೆ. ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ವಿರಾಲಿಮಲೈ ಪೊಲೀಸ್ ಠಾಣೆಗೆ ಹೋಗಿ ಗ್ರಾಮದ ಶಾಲೆಯ ಬಳಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರಂತೆ. ಇದರಿಂದ ಕೋಪಗೊಂಡ ಪೊಲೀಸರು, ಠಾಣೆಯಲ್ಲಿಯೇ ಮಹಿಳಾ ಪೊಲೀಸ್ ಸೇರಿದಂತೆ ನಾಲ್ವರು ಪೊಲೀಸರು ಶಂಕರ್ ಮೇಲೆ ಹಲ್ಲೆ ನಡೆಸಿದ್ದಾರಂತೆ. ಶಂಕರ್ ಪ್ರಕಾರ, ಪೊಲೀಸರು ಆತನ ಕೈಗಳನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರಂತೆ. ಆ ವೇಳೆ ಮಹಿಳಾ ಪೊಲೀಸ್ ಜೊತೆ ಮಾತನಾಡಲು ಪ್ರಯತ್ನಿಸಿದಾಗ, ಮಾಡಲು ಬೇರೆ ಕೆಲಸ ಇಲ್ಲವೇ ಎಂದು ಜರಿದು ಅವಮಾನಿಸಿದ್ದರಂತೆ.
ಇದನ್ನೂ ಓದಿ: ಮತ್ತೊಮ್ಮೆ ಮಣಿಪುರ ಸಿಎಂ ಆಗಿ ಬಿರೇನ್ ಸಿಂಗ್ ಅವಿರೋಧ ಆಯ್ಕೆ
ಘಟನೆ ನಂತರ ಮಾರ್ಚ್ 17 ರಂದು ಮೂವರು ಆರೋಪಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಈ ಮೂವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಸ್ವಯಂಪ್ರೇರಣೆಯಿಂದ ನೋವುಂಟುಮಾಡುವ ಮತ್ತು ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಈ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಗಾಯಗೊಳಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.