ಅಲಿರಾಜ್‌ಪುರ(ಮಧ್ಯಪ್ರದೇಶ): ಯುವತಿಯೋರ್ವಳ ಮೇಲೆ ಆಕೆಯ ತಂದೆ, ಸಹೋದರರು ಸೇರಿಕೊಂಡು ಅಮಾನವೀಯ ರೀತಿಯಲ್ಲಿ ಥಳಿಸಿರುವ ವಿಡಿಯೋ ದೊರೆತಿದೆ. ಇಡೀ ಮಾನವ ಸಮಾಜವೇ ತಲೆ ತಗ್ಗಿಸುವ ರೀತಿಯಲ್ಲಿ ಈ ಘಟನೆ ನಡೆದಿದೆ.
ಮಧ್ಯಪ್ರದೇಶದ ಅಲಿರಾಜ್ಪುರದಲ್ಲಿ ನಡೆದಿರುವ ಘಟನೆ ಇದು ಎನ್ನಲಾಗಿದ್ದು, ಆಕೆಯ ಮೇಲೆ ಹಲ್ಲೆ ನಡೆಸಿರುವುದಲ್ಲದೇ, ತಲೆ ಕೂದಲು ಹಿಡಿದು ಎಳೆದಾಡಿದ್ದಾರೆ. ಇದಾದ ಬಳಿಕ ಮರವೊಂದಕ್ಕೆ ತಲೆ ಕೆಳಗೆ ಮಾಡಿ ಕಟ್ಟಿ ಹಾಕಿದ್ದು, ಅಲ್ಲಿಯೂ ಮನಬಂದಂತೆ ಥಳಿಸಿದರು.
ಈ ಯುವತಿ ಕಳೆದ ಮೂರು ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದಳು. ಇದಾದ ಬಳಿಕ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದಳಂತೆ. ಅಲ್ಲಿಗೆ ತೆರಳಿರುವ ಕುಟುಂಬದ ಸದಸ್ಯರು ಸಾರ್ವಜನಿಕವಾಗಿ ಆಕೆಯ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪೊಲೀಸರು ಯುವತಿಯ ಹೇಳಿಕೆ ದಾಖಲಿಸಿಕೊಂಡಿದ್ದು, ಆರೋಪಿಗಳಾದ ತಂದೆ ಹಾಗೂ ಸಹೋದರರನ್ನು ಬಂಧಿಸಿದ್ದಾರೆ.
ಇದನ್ನೂ ಓದಿರಿ: ಗರ್ಭಿಣಿಯರು ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಬಹುದು: ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ
ಬುಡಕಟ್ಟು ಸಮಾಜಕ್ಕೆ ಸೇರಿದ್ದ ಯುವತಿ ಮಧ್ಯಪ್ರದೇಶ ರಾಜಧಾನಿ ಭೋಪಾಲ್ನಿಂದ 400 ಕಿಲೋ ಮೀಟರ್ ದೂರದ ಅಲಿರಾಜ್ಪುರದಲ್ಲಿ ವಾಸವಾಗಿದ್ದಳು. ಈ ಘಟನೆ ಜೂನ್ 28ರಂದು ನಡೆದಿದೆ ಎಂಬ ಮಾಹಿತಿ ದೊರೆತಿದೆ. ಈ ಕ್ರೌರ್ಯಕ್ಕೆ ನಿಖರವಾದ ಕಾರಣ ಮಾತ್ರ ಇನ್ನೂ ತಿಳಿದುಬಂದಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.