ನವದೆಹಲಿ: ವಾರಾಣಸಿ ಮತ್ತು ನವದೆಹಲಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವ್ಹೀಲ್ ಜಾಮ್ (ಚಕ್ರ ಜಾಮ್) ನಿಂದಾಗಿ ಸಂಚಾರ ಅರ್ಧಕ್ಕೆ ನಿಲ್ಲಿರುವ ಘಟನೆ ಉತ್ತರ ಪ್ರದೇಶದ ಖುರ್ಜಾ ನಿಲ್ದಾಣದಲ್ಲಿ ಇಂದು ನಡೆದಿದೆ. ಗಾಂಧಿನಗರ ಹಾಗೂ ಮುಂಬೈ ಮಧ್ಯದ ವಂದೇ ಭಾರತ್ ಎಕ್ಸ್‌ಪ್ರೆಸ್ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಸುದ್ದಿಯಾದ ಬೆನ್ನಲ್ಲೇ ರೈಲಿನಲ್ಲಿ ಈ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು ನವದೆಹಲಿ ರೈಲು ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಸರಿಯಾದ ಸಮಯಕ್ಕೆ ಸಂಚಾರ ಆರಂಭಿಸಿತ್ತು. ಆದರೆ, ಸುಮಾರು 90 ಕಿಮೀ ದೂರ ಕ್ರಮಿಸಿದ ನಂತರ ವ್ಹೀಲ್ ಜಾಮ್‌ನಿಂದಾಗಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದ ಉತ್ತರ ಪ್ರದೇಶದ ಖುರ್ಜಾ ನಿಲ್ದಾಣದಲ್ಲಿ ರೈಲು ನಿಲ್ಲಿಸಲಾಗಿದೆ. ಈ ರೈಲಿನಲ್ಲಿದ್ದ ಪ್ರಯಾಣಿಕರನ್ನು ಶತಾಬ್ದಿ ರೈಲಿನ ಮೂಲಕ ಕಳುಹಿಸಲಾಗಿದೆ. ಈ ವಿಷಯವನ್ನು ಖುದ್ದು ಅಧಿಕಾರಿಗಳು ಖಚಿತ ಪಡಿಸಿದ್ದು, 'ಟ್ರಾಕ್ಷನ್ ಮೋಟಾರ್' ದೋಷದಿಂದ ಚಕ್ರಗಳು ಸಂಪೂರ್ಣವಾಗಿ ತಿರುಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ
ವಂದೇ ಭಾರತ್ ರೈಲು (ರೈಲು ಸಂಖ್ಯೆ 22436) ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸಲು ಪ್ರಾರಂಭಿಸಿತ್ತು. ದೆಹಲಿಯಿಂದ 67 ಕಿಮೀ ದೂರದಲ್ಲಿರುವ ಬುಲಂದ್‌ಶಹರ್ ನಿಲ್ದಾಣಕ್ಕೆ ಬೆಳಗ್ಗೆ 7.30ಕ್ಕೆ ತಲುಪಿತು. ಇದಾದ ನಂತರ 20 ಕಿಮೀ ವೇಗದಲ್ಲಿ ಕ್ರಮಿಸಿ ಖುರ್ಜಾ ನಿಲ್ದಾಣವನ್ನು ರೈಲು ಬಂದು ನಿಂತಿತು. ಸಿ-8 ಕೋಚ್‌ನ ಟ್ರಾಕ್ಷನ್ ಮೋಟರ್ ದೋಷದಿಂದ ವ್ಹೀಲ್ ಜಾಮ್ ಆಗಿವೆ ಎಂದು ರೈಲ್ವೆ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಲ್ಲದೇ, ಜಾಮ್ ಪರಿಸ್ಥಿತಿಯನ್ನು ಸರಿಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿನ ಈ ವೈಫಲ್ಯದ ಬಗ್ಗೆ ಸಮಗ್ರ ತನಿಖೆ ಮಾಡಲಾಗುವುದು ಎಂದೂ ರೈಲ್ವೇ ಇಲಾಖೆ ತಿಳಿಸಿದೆ. ಇನ್ನು, ಕಳೆದ ಮೂರು ದಿನಗಳಿಂದಲೂ ವಂದೇ ಭಾರತ್ ರೈಲು ಸುದ್ದಿಯಲ್ಲಿದೆ. ಗಾಂಧಿನಗರ ಹಾಗೂ ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗುರುವಾರ ಮತ್ತು ಶುಕ್ರವಾರದಂದು ಸತತವಾಗಿ ಎರಡೂ ದಿನವು ಜಾನುವಾರುಗಳಿಗೆ ಡಿಕ್ಕಿ ಹೊಡೆದು ಸುದ್ದಿಯಾಗಿತ್ತು. ಈ ಘಟನೆಯಿಂದ ಎರಡೂ ದಿನ ಕೂಡ ರೈಲಿನ ಮುಂಭಾಗವು ಜಖಂಗೊಂಡಿತ್ತು.
ಇದನ್ನೂ ಓದಿ: ಆರಂಭವಾದ ಆರೇ ದಿನಗಳಲ್ಲಿ ಎಮ್ಮೆಗಳಿಗೆ ಡಿಕ್ಕಿ ಹೊಡೆದು ವಂದೇ ಭಾರತ್ ಹೈಸ್ಪೀಡ್ ರೈಲು ಜಖಂ