ಕಣ್ಣೂರು, ಕೇರಳ: ಉದ್ಘಾಟನೆಗೊಂಡ ದಿನವೇ ತಿರುವನಂತಪುರ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಎಸಿ ಗ್ರಿಲ್ನಿಂದ ನೀರು ಸೋರಿಕೆಯಾಗುತ್ತಿರುವುದು ಕಂಡು ಬಂದಿದ್ದು, ಕೂಡಲೇ ಅದನ್ನು ಸರಿಪಡಿಸಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಇದೇನು ದೊಡ್ಡ ಸಮಸ್ಯೆ ಅಲ್ಲ. ಕೇವಲ ಒಂದು ಕೋಚ್‌ನಲ್ಲಿ ಮಾತ್ರ ಸೋರಿಕೆ ಕಂಡು ಬಂದಿತ್ತು. ಅದನ್ನು ಕೂಡಲೇ ಸರಿಪಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬುಧವಾರ ಬೆಳಗ್ಗೆ ಎಸಿ ಗ್ರಿಲ್ನಿಂದ ಸೋರಿಕೆ ಆಗುತ್ತಿದ್ದ ಬಗ್ಗೆ ಗಮನಕ್ಕೆ ಬಂದಿತು. ನಂತರ ರೈಲ್ವೆಯ ತಾಂತ್ರಿಕ ತಜ್ಞರು ಸ್ಥಳಕ್ಕೆ ಆಗಮಿಸಿ ಸರಿಪಡಿಸಿದರು. ಆರಂಭದಲ್ಲಿ ಇಂತಹ ಸಣ್ಣಪುಟ್ಟ ಸಮಸ್ಯೆಗಳು ಸಹಜ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ ಮೊದಲ ವಂದೇ ಭಾರತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದ್ದರು. ಮೋದಿ ಚಾಲನೆ ನೀಡಿದ್ದ ದಿನವೇ ರೈಲಿನಲ್ಲಿ ದೋಷ ಕಂಡುಬಂದಿತ್ತು. ಸಮಸ್ಯೆ ಬಗೆಹರಿದ ಬಳಿಕ ರೈಲು ಬುಧವಾರ ಮಧ್ಯಾಹ್ನ 2.30ಕ್ಕೆ ಕಾಸರಗೋಡಿನಿಂದ ತಿರುವನಂತಪುರಕ್ಕೆ ಪ್ರಯಾಣ ಬೆಳಸಿತು.
ವಂದೇ ಭಾರತ್ ರೈಲಿಗೆ ಚಾಲನೆ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕೇರಳ ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದರು. ರಾಜಧಾನಿ ತಿರುವನಂತಪುರಂ ಮತ್ತು ಕಾಸರಗೋಡು ನಡುವೆ ಈ ರೈಲು ಸಂಚರಿಸುತ್ತದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬಗ್ಗೆ: ಕೇರಳದ ಮೊದಲ ವಂದೇ ಭಾರತ್ ರೈಲು ಏಪ್ರಿಲ್ 28ರಿಂದ ಕಾರ್ಯನಿರ್ವಹಿಸಲಿದೆ. ಈ ರೈಲಿನಲ್ಲಿ ಚೇರ್ ಕಾರ್ ಟಿಕೆಟ್ ದರ ತಿರುವನಂತಪುರಂನಿಂದ ಕಾಸರಗೋಡಿಗೆ 1,590 ರೂ. ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಸೀಟಿಂಗ್ ಟಿಕೆಟ್ ದರ 2,880 ರೂ. ಇದೆ. ತಿರುವನಂತಪುರಂ ಸೆಂಟ್ರಲ್ ರೈಲು ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 5.20 ಕ್ಕೆ ಹೊರಡಲಿದೆ. ಎಂಟು ಗಂಟೆ ಐದು ನಿಮಿಷಗಳಲ್ಲಿ ಕಾಸರಗೋಡಿಗೆ ಸಂಚರಿಸುತ್ತದೆ. ತಿರುವನಂತಪುರಂ ಆರಂಭವಾಗುವ ರೈಲು ಬೆಳಗ್ಗೆ 6.07ಕ್ಕೆ ಕೊಲ್ಲಂಗೆ ತಲುಪುತ್ತದೆ. ಕೊಟ್ಟಾಯಂ - 7.25, ಎರ್ನಾಕುಲಂ ಟೌನ್ - 8.17, ತ್ರಿಶೂರ್ - 9.22, ಶೋರ್ನೂರು - 10.02, ಕೋಯಿಕ್ಕೋಡ್ - 11.03, ಕಣ್ಣೂರು - ಮಧ್ಯಾಹ್ನ 12.03 ಮತ್ತು ಕಾಸರಗೋಡಿಗೆ ಮಧ್ಯಾಹ್ನ 1.25ಕ್ಕೆ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 2.30ಕ್ಕೆ ವಾಪಸ್ ಪ್ರಯಾಣ ಆರಂಭವಾಗಲಿದೆ.
ಕಾಸರಗೋಡಿಗೆ ಕಣ್ಣೂರಿಗೆ ಮಧ್ಯಾಹ್ನ 3.28, ಕೋಝಿಕ್ಕೋಡ್ - 4.28, ಶೋರ್ನೂರು - 5.28, ತ್ರಿಶೂರ್ - 6.03, ಎರ್ನಾಕುಲಂ - 7.05, ಕೊಟ್ಟಾಯಂ - 8 ಗಂಟೆ, ಕೊಲ್ಲಂ - 9.18 ಮತ್ತು ತಿರುವನಂತಪುರಂಕ್ಕೆ ರಾತ್ರಿ 10.35ಕ್ಕೆ ರೈಲು ತಲುಪುತ್ತದೆ. ವಂದೇ ಭಾರತ್ ರೈಲಿನ ಗರಿಷ್ಠ ವೇಗ ಗಂಟೆಗೆ 180 ಕಿ.ಮೀ. ಇದೆ. ಆದರೆ, ಕೇರಳ ರೈಲು ಮಾರ್ಗದಲ್ಲಿ ಸುಮಾರು 600 ಕರ್ವ್‌ಗಳಿವೆ. ಆದ್ದರಿಂದ ತಿರುವನಂತಪುರದಿಂದ ಕಣ್ಣೂರಿಗೆ ಪ್ರಾರಂಭವಾಗುವ ಮೊದಲ ಹಂತದಲ್ಲಿ ಗರಿಷ್ಠ ವೇಗ 100 ರಿಂದ 110 ಕಿ.ಮೀ. ಇರಲಿದೆ ಅಂದಾಜಿಸಲಾಗಿದೆ.
ಓದಿ: ಕೊಚ್ಚಿಯಲ್ಲಿ ದೇಶದ ಮೊದಲ ವಾಟರ್ ಮೆಟ್ರೋ ಸೇವೆ.. ಇಂದು ಪ್ರಧಾನಿ ಮೋದಿ ಚಾಲನೆ