ರಾಯ್ ಬರೇಲಿ (ಉತ್ತರ ಪ್ರದೇಶ): ಕೌಟುಂಬಿಕ ಕಲಹದಿಂದ ಕುಪಿತಗೊಂಡ ವ್ಯಕ್ತಿಯೋರ್ವ ಮಚ್ಚಿನಿಂದ ತನ್ನ ಪತ್ನಿಯ ಒಂದು ಕೈ ಹಾಗೂ ಎರಡು ಕಾಲುಗಳನ್ನು ಕತ್ತರಿಸಿರುವ ಬೀಭತ್ಸ ಘಟನೆ ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯ ಪರಿಸ್ಥಿತಿ ಚಿಂತಾಜನವಾಗಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.
ಕಾನ್ಪುರ ಜಿಲ್ಲೆಯ ಜಕರ್ಕಟಿ ನಿವಾಸಿ ವಾಸುದೇವ್ ಎಂಬವರ ಪುತ್ರ ಕಪಿಲ್ ಎಂಬಾತನೇ ಈ ದುಷ್ಕೃತ್ಯ ಎಸಗಿದ ದುರುಳ. 27 ವರ್ಷದ ಶಿವಕಲಾ ಅವರು ಒಂದು ಕೈ ಹಾಗೂ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಭಾನುವಾರ ರಾತ್ರಿ ತಮ್ಮ ತವರು ತರೂರು, ಸರೇನಿ ಪ್ರದೇಶದ ರಾಮ್ಖೇಡಾ ಎಂಬ ಗ್ರಾಮದಲ್ಲೇ ಆರೋಪಿ ಅಮಾನುಷ ಹಲ್ಲೆ ಮಾಡಿದ್ದಾನೆ.
ಈ ಕುರಿತು ಸರ್ಕಲ್ ಪೊಲೀಸ್ ಅಧಿಕಾರಿ ಲಾಲ್‌ಗಂಜ್ ಮಹಿಪಾಲ್ ಪಾಠಕ್ ಪ್ರತಿಕ್ರಿಯಿಸಿ, ''ಕಪಿಲ್ ಹಾಗೂ ಶಿವಕಲಾ ವಿವಾಹವಾದಾಗಿನಿಂದಲೂ ಕೌಟುಂಬಿಕ ವಿವಾದದಲ್ಲಿ ಸಿಲುಕಿದ್ದರು. ಇದರಿಂದ ಆಕೆ ನಮ್ಮ ತವರು ಮನೆಯಲ್ಲೇ ವಾಸಿಸುತ್ತಿದ್ದಾಳೆ. ಭಾನುವಾರ ರಾತ್ರಿ ಕಪಿಲ್ ಮದ್ಯದ ಅಮಲಿನಲ್ಲಿ ಮನೆಗೆ ಹೋಗಿ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಆಗ ಪತ್ನಿ ಗಂಡನಿಗೆ ಪ್ರತಿರೋಧವೊಡ್ಡಿದ್ದಾಳೆ. ಹೀಗಾಗಿ ಕೋಪಗೊಂಡ ಪತಿ ಮಚ್ಚಿನಿಂದ ಆಕೆ ಒಂದು ಕೈ ಮತ್ತು ಎರಡು ಕಾಲು ಕತ್ತರಿಸಿದ್ದಾನೆ. ಮಹಿಳೆಯ ಕಿರುಚಾಟ ಕೇಳಿದ ನೆರೆ ಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ'' ಎಂದು ತಿಳಿಸಿದರು.
''ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಚಿಂತಾಜನಕ ಸ್ಥಿತಿಯಲ್ಲಿರುವ ಆಕೆಗೆ ಭೋಜ್‌ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ, ಆರೋಪಿ ಪತಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಎರಡನೇ ಮದುವೆಗಾಗಿ ಪತ್ನಿಗೆ ವಿದ್ಯುತ್ ಶಾಕ್ ನೀಡಿ ಹತ್ಯೆ ಮಾಡಲು ಯತ್ನಿಸಿದ ಪತಿ ಬಂಧನ