ನವದೆಹಲಿ: ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ ಇಂದು ರಾಜಧಾನಿ ದೆಹಲಿಯಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದರು.
ಸದ್ಯ ಮೂರು ದಿನಗಳ ಭಾರತ ಅಧಿಕೃತ ಪ್ರವಾಸದಲ್ಲಿರುವ ಆಸ್ಟಿನ್ , ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಇದು ಜೋ ಬೈಡನ್ ಆಡಳಿತದ ಉನ್ನತ ಅಧಿಕಾರಿಯೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿಯಾಗಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್ ಶುಕ್ರವಾರ ಉಭಯ ರಾಷ್ಟ್ರಗಳ ಆಸಕ್ತಿ, ಕಾರ್ಯತಂತ್ರದ ಸಹಭಾಗಿತ್ವ ಮತ್ತು ಭದ್ರತೆ ಮತ್ತು ರಕ್ಷಣೆಯ ವಿವಿಧ ಅಂಶಗಳ ಸಹಕಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ನಿನ್ನೆ ರಾತ್ರಿ ಅಜಿತ್ ದೋವಲ್ ಅವರೊಂದಿಗೆ ಸಭೆ ಉತ್ತಮವಾಗಿ ನಡೆಯಿತು. ಇಂಡೋ - ಪೆಸಿಫಿಕ್ ಪ್ರದೇಶದಲ್ಲಿ ಎದುರಾಗಿರುವ ಅತ್ಯಂತ ಮಹತ್ವದ ಸವಾಲುಗಳನ್ನು ಎದುರಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತಿರುವಾಗ ಉಭಯ ರಾಷ್ಟ್ರಗಳ ಸಹಯೋಗದ ವಿಸ್ತಾರವು ನಮ್ಮ ಪ್ರಮುಖ ರಕ್ಷಣಾ ಸಹಭಾಗಿತ್ವದ ಮಹತ್ವವನ್ನು ಪ್ರತಿಬಿಂಬಿಸುತ್ತದೆ "ಎಂದು ಆಸ್ಟಿನ್ ಶನಿವಾರ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮೊದಲು, ಆಸ್ಟಿನ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸುವ ಅಮೆರಿಕದ ಬಲವಾದ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಿ ಇಂದಿಗೆ ಒಂದು ವರ್ಷ