ಆಗ್ರಾ: ಉತ್ತರಪ್ರದೇಶದ ಯುಪಿಎಸ್‌ಎಸ್‌ಎಸ್‌ಸಿ (UPSSC) ನಡೆಸುತ್ತಿದ್ದ ಗ್ರಾಮ ಪಂಚಾಯಿತಿ ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿ ಪರೀಕ್ಷೆಯಲ್ಲಿ ಬಿಹಾರ ಗ್ಯಾಂಗ್ ಭಾರೀ ಅಕ್ರಮ ನಡೆಸಿರುವುದು ಬೆಳಕಿಗೆ ಬಂದಿದೆ. ಪರೀಕ್ಷಾರ್ಥಿಯ ಬದಲಾಗಿ ಬೇರೆಯವರನ್ನು ಕೂರಿಸಿದ್ದು, 6 ಮಂದಿಯನ್ನು ವಿಶೇಷ ಕಾರ್ಯಪಡೆ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಆಗ್ರಾ ಕಾಲೇಜಿನ ಮಹಿಳಾ ವಿಭಾಗ, ಕಾನೂನು ವಿಭಾಗ ಮತ್ತು ಎಂಡಿ ಜೈನ್ ಕಾಲೇಜಿನಲ್ಲಿ ಅಭ್ಯರ್ಥಿಗಳ ಬದಲಿಗೆ ಬೇರೆಯವರು ಪರೀಕ್ಷೆ ತೆಗೆದುಕೊಂಡಿದ್ದು, ಅಂಥವರನ್ನು ಗುರತಿಸಿ ಬಂಧಿಸಲಾಗಿದೆ. ವಿಚಾರಣೆ ನಡೆಸಿದಾಗ ಅವರು ಬಿಹಾರ ಗ್ಯಾಂಗ್ಗೆ ಸೇರಿದವರು ಎಂದು ಬಾಯ್ಬಿಟ್ಟಿದ್ದಾರೆ. ಇನ್ನುಳಿದವರು ಮತ್ತು ಬಿಹಾರದ ಗ್ಯಾಂಗ್ ವಶಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪರೀಕ್ಷೆ ಪಾಸ್ಗಾಗಿ 7 ಲಕ್ಷ ರೂಪಾಯಿ ಡೀಲ್: ಗ್ರಾಮ ಪಂಚಾಯತ್ ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿಗಳ ಪರೀಕ್ಷೆಯಲ್ಲಿ ಪಾಸ್ ಮಾಡಲು ಪ್ರತಿ ಒಬ್ಬ ಅಭ್ಯರ್ಥಿಗೆ 7 ಲಕ್ಷ ರೂಪಾಯಿ ಡೀಲ್ ಕುದುರಿಸಲಾಗಿದೆ. ಬಿಹಾರವಲ್ಲದೇ, ಪೂರ್ವಾಂಚಲದ ಗ್ಯಾಂಗ್ ಕೂಡ ಅಕ್ರಮದಲ್ಲಿ ಭಾಗಿಯಾಗಿದೆ ಎಂದು ತಿಳಿದು ಬಂದಿದೆ. ಆಗ್ರಾ ಮಾತ್ರವಲ್ಲದೇ ರಾಜ್ಯದ ಇತರ ಜಿಲ್ಲೆಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ಅಭ್ಯರ್ಥಿಗಳನ್ನು ಪರೀಕ್ಷೆಯಲ್ಲಿ ಕೂರಿಸಲಾಗಿದೆ ಎಂಬ ರಹಸ್ಯ ಬಯಲಾಗಿದೆ.
ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ತಕ್ಷಣ ಕಾರ್ಯಾಚರಣೆಗಿಳಿದ ಎಸ್ಟಿಎಫ್ ಮತ್ತು ಪೊಲೀಸರು, ಮೊದಲು ಶಹಗಂಜ್‌ನ ಲೀಲಾಶಾ ಕಾಲೇಜಿನಲ್ಲಿ ನಕಲಿ ಅಭ್ಯರ್ಥಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ತಾನು ಪದವೀಧರನಾಗಿದ್ದು, ಬೇರೊಬ್ಬನ ಪರವಾಗಿ ಪರೀಕ್ಷೆ ಬರೆಯುತ್ತಿರುವುದಾಗಿ ತಿಳಿಸಿದ್ದಾನೆ. ತಾನು ಸ್ವತಃ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ. ತಂದೆಗೆ ಕ್ಯಾನ್ಸರ್ ಮತ್ತು ತಾಯಿಯ ಅನಾರೋಗ್ಯ ಕಾರಣ ಹಣದ ಅಗತ್ಯಕ್ಕಾಗಿ ಈ ದಂಧೆಯಲ್ಲಿ ತೊಡಗಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಇನ್ನೊಂದೆಡೆ ಕ್ವೀನ್ ವಿಕ್ಟೋರಿಯಾ ಇಂಟರ್ ಕಾಲೇಜಿನಲ್ಲಿ ಮತ್ತೊಬ್ಬ ನಕಲಿ ಅಭ್ಯರ್ಥಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಈತ ಬಿಹಾರಕ್ಕೆ ಸೇರಿದವನಾಗಿದ್ದು, ಬಿಎಸ್‌ಸಿ ಎರಡನೇ ವರ್ಷದ ವಿದ್ಯಾರ್ಥಿ ಎಂದು ತಿಳಿಸಿದ್ದಾನೆ. ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಹಣದಾಸೆಗಾಗಿ 'ಸಾಲೋವರ್ ಗ್ಯಾಂಗ್ನ ದಂಧೆಯಲ್ಲಿ ತೊಡಗಿಸಿಕೊಂಡಿದ್ದೇನೆ. ತನಗೆ ಪರೀಕ್ಷೆ ಬರೆಯಲು 5 ಸಾವಿರ ನೀಡಲಾಗಿದೆ. ಅನೇಕ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಆತ ತಿಳಿಸಿದ್ದಾರೆ.
ಕಾರು ಬಿಟ್ಟು ಓಡಿ ಹೋದ ಅಭ್ಯರ್ಥಿ: ಆಗ್ರಾ ಕಾಲೇಜಿನ ಮಹಿಳಾ ವಿಭಾಗದಲ್ಲಿ ನಕಲಿ ಅಭ್ಯರ್ಥಿ ಸಿಕ್ಕಿಬಿದ್ದಾಗ, ಕೇಂದ್ರದ ಹೊರಗೆ ಇದ್ದ ನಿಜವಾದ ಅಭ್ಯರ್ಥಿ ತನ್ನ ವಾಹನವನ್ನು ಕಾಲೇಜಿನ ಮುಂದೆಯೇ ಬಿಟ್ಟು ಓಡಿಹೋಗಿದ್ದಾನೆ. ಕಾಲೇಜಿನಲ್ಲಿ ಹತ್ರಾಸ್ ನಿವಾಸಿ ರಘುವೀರ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ ಎಂದು ನಗರ ಡಿಸಿಪಿ ಸೂರಜ್ ರೈ ತಿಳಿಸಿದ್ದಾರೆ. ಅಲಿಗಢದ ಅಟ್ರೌಲಿ ನಿವಾಸಿ ವಿರೇಶ್ ಕುಮಾರ್ ಅವರ ಬದಲಿಗೆ ಅವರು ಪರೀಕ್ಷೆ ಬರೆಯುತ್ತಿದ್ದರು. ಹೊರಗೆ ಸಿಕ್ಕ ಕಾರು ತಪಾಸಣೆ ನಡೆಸಿದಾಗ ಅದರಲ್ಲಿ ಪ್ರಶ್ನೆತ್ರಿಕೆಯ ನಕಲಿ ನಮೂನೆ, 39 ಸಾವಿರ ರೂಪಾಯಿ ಸಿಕ್ಕಿವೆ.
ಗ್ರಾಮ ಪಂಚಾಯತ್ ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿ ಹುದ್ದೆಯ ಪರೀಕ್ಷೆಯಲ್ಲಿ ಬಿಹಾರ ಮತ್ತು ಪೂರ್ವಾಂಚಲ್‌ನ ಅನೇಕ ಗ್ಯಾಂಗ್‌ಗಳು ಭಾಗಿಯಾಗಿದ್ದು ಕಂಡು ಬಂದಿದೆ. ನಿಖರ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಗಿದೆ. 6 ಮಂದಿಯನ್ನ ಸದ್ಯಕ್ಕೆ ಬಂಧಿಸಲಾಗಿದ್ದು, ಇನ್ನು ಹಲವರನ್ನು ಬಂಧಿಸಲಾಗುವುದು ಎಂದು ಎಸ್ಟಿಎಫ್ ಅಧಿಕಾರಿ ಉದಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಟಾಟಾ ಸಂಸ್ಥೆಯಲ್ಲಿ ಲೈಬ್ರರಿ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ; 55 ಸಾವಿರ ರೂವರೆಗೆ ವೇತನ