ಮುಂಬೈ: ಡ್ರಗ್ ಪಾರ್ಟಿ ಪ್ರಕರಣ ಸಂಬಂಧ 20 ದಿನಗಳಿಂದ ಬಂಧನದಲ್ಲಿರುವ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ನಾಳೆಗೆ ಮುಂದೂಡಿದೆ. ಇಂದು ವಾದ - ಪ್ರತಿವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದು, ಆರ್ಯನ್ ಪರ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಮತ್ತು ಇತರ ಖ್ಯಾತ ವಕೀಲರು ವಾದಿಸಿದ್ದರು. ಇನ್ನು ಎನ್‌ಸಿಬಿ ನಾಳೆ ವಾದ ಮಂಡಿಸಲಿದೆ.
ಇದರ ನಡುವೆ ವಿಚಾರಣೆ ವೇಳೆ, ನ್ಯಾಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಕಲಾಪಕ್ಕೆ ಸ್ವಲ್ಪ ಅಡ್ಡಿಯುಂಟಾಯಿತು. ನಂತರ ಪೊಲೀಸರು ನ್ಯಾಯಾಲಯದಲ್ಲಿ ನೆರೆದಿದ್ದ ಗುಂಪನ್ನು ಕಡಿಮೆ ಮಾಡಿದರು. ಇಂದು ಒಂದು ಕಡೆ ಮಾತ್ರ ಆಲಿಸಿದ ನ್ಯಾಯಾಲಯ ನಾಳೆ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಪುನರಾರಂಭಿಸಲಾಗುತ್ತದೆ ಎಂದು ತಿಳಿಸಿದೆ.
ಇಂದು ನ್ಯಾಯಾಲಯದಲ್ಲಿ ಏನೆಲ್ಲಾ ನಡೆಯಿತು?
ರೋಹಟಗಿ ಆರ್ಯನ್ ಪರ ಎರಡು ಗಂಟೆಗಳ ಕಾಲ ವಾದ ಮಂಡಿಸಿದರು. ಈ ಬಾರಿ ಅವರು ಹಲವಾರು ಹಕ್ಕುಗಳನ್ನು ಮಂಡಿಸಿದರು ಮತ್ತು ಆರ್ಯನ್ ನಿರಪರಾಧಿ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಕ್ರೂಸ್ ಹತ್ತುವ ಮೊದಲು ಆರ್ಯನ್ ಬಂಧಿಸಲಾಯಿತು. ಬಂಧನಕ್ಕೂ ಮುನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರಲಿಲ್ಲ ಎಂದು ರೋಹಟಗಿ ಹೇಳಿದ್ದಾರೆ.
ಆನ್‌ಲೈನ್ ಗೇಮಿಂಗ್‌ನ ಚರ್ಚೆ:
ಆರ್ಯನ್ ಖಾನ್ ಮತ್ತು ಅಚಿತ್ ಕುಮಾರ್ ಸಂಬಂಧದ ಬಗ್ಗೆ ವಾದ ಮಾಡಿದ ಅವರು, ಅಚಿತ್ ಕುಮಾರ್ ಸಮುದ್ರಯಾನದಲ್ಲಿ ಇರಲಿಲ್ಲ. ಅವರನ್ನು ಮನೆಯಿಂದಲೇ ಬಂಧಿಸಲಾಗಿದೆ. ಆರ್ಯನ್ ಮತ್ತು ಅಚಿತ್ ಆನ್‌ಲೈನ್ ಗೇಮಿಂಗ್ ಕುರಿತು ಚರ್ಚಿಸಿದ್ದರು. 12 ರಿಂದ 14 ತಿಂಗಳ ಹಿಂದೆ ಈ ಚಾಟಿಂಗ್ ನಡೆದಿದೆ ಎಂದು ರೋಹಟಗಿ ಮತ್ತು ಅಮಿತ್ ದೇಸಾಯಿ ನ್ಯಾಯಾಲಯಕ್ಕೆ ತಿಳಿಸಿದರು.
ಆರ್ಯನ್ ಖಾನ್ ವಿರುದ್ಧ ಎನ್‌ಡಿಪಿಎಸ್‌ನ ಸೆಕ್ಷನ್ 8 (ಸಿ), 20 ಬಿ, 27 ಮತ್ತು 35 ರ ಅಡಿ ಆರೋಪ ಹೊರಿಸಲಾಗಿದೆ. ಈ ಕಾಯಿದೆಯಡಿ ತಪ್ಪಿತಸ್ಥರಾಗಿದ್ದರೆ, ಗರಿಷ್ಠ 1 ವರ್ಷ ಶಿಕ್ಷೆ ವಿಧಿಸಲಾಗುತ್ತದೆ. ಆರ್ಯನ್ ಖಾನ್ ಅವರ ಮೊಬೈಲ್‌ನಲ್ಲಿ ವಾಟ್ಸ್ಆ್ಯಪ್ ಚಾಟಿಂಗ್‌ಗೂ ಕ್ರೂಸ್ ಪಾರ್ಟಿಗೂ ಏನು ಸಂಬಂಧ ಎಂದು ರೋಹಟಗಿ ಅವರನ್ನು ಕೋರ್ಟ್ ಕೇಳಿದೆ. ಅದಕ್ಕೆ ಉತ್ತರಿಸಿದ ರೋಹಟಗಿ, ಆರ್ಯನ್ ಖಾನ್ ಅವರ ಚಾಟಿಂಗ್, ಕ್ರೂಸ್ ಪಾರ್ಟಿ ಮುಂಚೆಯೇ ಇತ್ತು ಎಂದು ಉತ್ತರಿಸಿದರು.
ಸಮರ್ಥಿಸಿಕೊಂಡ ವಾಂಖೆಡೆ ಪತ್ನಿ
ವಾಂಖೆಡೆ ಪತ್ನಿ ಕ್ರಾಂತಿ ರೆಡ್ಕರ್ ತಮ್ಮ ಪತಿಯನ್ನು ಸಮರ್ಥಿಸಲು ಮುಂದಾಗಿದ್ದಾರೆ. ಸುಳ್ಳು ಆರೋಪ ಮಾಡಿ ಟ್ವೀಟ್ ಮಾಡುವುದರಿಂದ ಏನೂ ಆಗುವುದಿಲ್ಲ ಎಂದ ಅವರು ಆರೋಪಿಗಳಿಗೆ ಸಾಕ್ಷ್ಯಾಧಾರ ನೀಡುವಂತೆ ಸವಾಲು ಹಾಕಿದ್ದಾರೆ.
ದೆಹಲಿ ತಲುಪಿದ ವಾಂಖೆಡೆ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ:
ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಸೋಮವಾರ ರಾತ್ರಿ ದೆಹಲಿ ತಲುಪಿದ್ದಾರೆ. ಅವರು ಎನ್‌ಸಿಬಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ನಾಳೆ ಅವರು ರಾಜ್ಯಕ್ಕೆ ಬರುವ ಸಾಧ್ಯತೆ ಇದೆ. ವಾಂಖೆಡೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮಾಧ್ಯಮದವರು ಅವರ ಜೊತೆ ಮಾತನಾಡಲು ಪ್ರಯತ್ನಿಸಿದರು. ಆದರೆ, ನಾನು ಕೆಲವು ಮಹತ್ವದ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದೇನೆ ಎಂದು ಹೇಳಿದರು. ಅದನ್ನು ಬಿಟ್ಟರೆ ಅವರು ಏನನ್ನೂ ಬಿಟ್ಟುಕೊಡಲಿಲ್ಲ.
ಮುಖ್ಯಮಂತ್ರಿ , ಗೃಹ ಸಚಿವರನ್ನು ಭೇಟಿ ಮಾಡಿದ ನವಾಬ್ ಮಲಿಕ್ :
ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಅವರು ಇಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಗೃಹ ಸಚಿವ ದಿಲೀಪ್ ವಾಲ್ಸೆ-ಪಾಟೀಲ್ ಅವರನ್ನು ಭೇಟಿ ಮಾಡಿ ಎಸ್‌ಐಟಿ ಮೂಲಕ ತನಿಖೆಗೆ ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಜತೆ ಮಾತನಾಡುವಾಗ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ನಕಲಿ ಡ್ರಗ್ ಪ್ರಕರಣಗಳಲ್ಲಿ ಬಾಲಿವುಡ್ ಅನ್ನು ಅನಗತ್ಯವಾಗಿ ಅಪಖ್ಯಾತಿಗೊಳಿಸಲಾಗುತ್ತಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಿದ್ದಾರೆ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಹೇಳಿದ್ದಾರೆ.