ನವದೆಹಲಿ/ಬೆಂಗಳೂರು: ಮುಂಬರುವ ಜೂನ್ನಲ್ಲಿ ನಡೆಯುವ ವಿಧಾನಪರಿಷತ್ ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಪ್ರಕಟಿಸಿದೆ.
ಬೆಳಗಾವಿ, ವಿಜಯಪುರ, ಚಿಕ್ಕೋಡಿ ಹಾಗೂ ಬಾಗಲಕೋಟೆ ಜಿಲ್ಲೆಯನ್ನೊಳಗೊಂಡ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳು, ಹುಬ್ಬಳ್ಳಿ-ಧಾರವಾಡ, ಧಾರವಾಡ ಗ್ರಾಮೀಣ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.
ಮುಂದಿನ ಜೂನ್ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದ್ದು, ಇದುವರೆಗೂ ಚುನಾವಣಾ ಆಯೋಗದಿಂದ ಅಧಿಕೃತ ದಿನಾಂಕ ಪ್ರಕಟಗೊಂಡಿಲ್ಲ. ಕಾಂಗ್ರೆಸ್ ಪಕ್ಷದ ಯಾವುದೇ ಸ್ಥಾನ ಈ ಸಂದರ್ಭದಲ್ಲಿ ತೆರವಾಗುತ್ತಿಲ್ಲ. ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ 4 ಕ್ಷೇತ್ರಗಳಿಗೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ ಎಂದು ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಅಧಿಕೃತವಾಗಿ ಪ್ರಕಟಿಸಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮತಿ ಮೇರೆಗೆ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿ ಮಧು ಜಿ ಮಾದೇಗೌಡ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಬಸವರಾಜ ಗುರಿಕಾರ ಆಯ್ಕೆಯಾಗಿದ್ದಾರೆ. ಉಳಿದೆರಡು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಶೀಘ್ರವೇ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮಧು ಜಿ. ಮಾದೇಗೌಡ 2018ರ ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಇದೀಗ ಈ ಭಾಗದ ಮತದಾರರ ಒಲವು ನಂಬಿ ವಿಧಾನಪರಿಷತ್ ನಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ.
2020ರಲ್ಲಿ ಪಶ್ಚಿಮ ಪದವಿಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸವರಾಜ ಗುರಿಕಾರಗೆ ಆಗ ಜೆಡಿಎಸ್ ಪಕ್ಷ ಬೆಂಬಲ ನೀಡಿತ್ತು. ಆದರೂ ಅವರು ಸೋಲನುಭವಿಸಿದ್ದರು. ಇದೀಗ ಅದೇ ಭಾಗದ ಶಿಕ್ಷಕರ ಕ್ಷೇತ್ರದಿಂದ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಯಾವುದೇ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧೆ ಮಾಡಿದರೆ ಅವರ ತತ್ವ-ಸಿದ್ಧಾಂತಗಳಿಗೆ ಬದಲಾಗಬೇಕಾಗುತ್ತದೆ. ಇದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಈ ಹಿಂದೆ ತಿಳಿಸಿದ್ದರು. ಆದರೆ ಇದೀಗ ಕಾಂಗ್ರೆಸ್ನಿಂದ ಸ್ಪರ್ಧಿಸಲು ಮುಂದಾಗಿದ್ದು, ಪಕ್ಷದ ಹೈಕಮಾಂಡ್ ಸಹ ಒಪ್ಪಿಗೆ ನೀಡಿದೆ.
ಇದನ್ನೂ ಓದಿ: ಇತಿಹಾಸ ಸೃಷ್ಟಿ: ಸ್ವಾತಂತ್ರ್ಯದ ಬಳಿಕ ಶ್ರೀನಗರದ ಲಾಲ್ಚೌಕ್ನಲ್ಲಿ ಮೊದಲ ಸಲ ಹಾರಿದ ತ್ರಿವರ್ಣ ಧ್ವಜ