ನವದೆಹಲಿ : ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿಂದು ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಲಿದ್ದಾರೆ. ನೋಯಿಡಾದಲ್ಲಿ ಪಂಖುರಿ ಪಾಠಕ್ ಅವರಿಗೆ ಕೈಪಕ್ಷ ಟಿಕೆಟ್ ನೀಡಿದೆ.
ಯುಪಿಯಲ್ಲಿ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಪ್ರಿಯಾಂಕಾ ಅವರಿಗೆ ಇದು ಮೊದಲ ಮನೆ-ಮನೆ ಪ್ರಚಾರ ಕಾರ್ಯಕ್ರವಾಗಿದೆ. ಈಗಾಗಲೇ ಇವರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ಯೂಟ್ಯೂಬ್ ಮೂಲಕ ಮತದಾರರೊಂದಿಗೆ ಸಂವಾದಗಳನ್ನು ನಡೆಸುತ್ತಿದ್ದಾರೆ. ನಾಳೆ ದಾದ್ರಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.
ನೋಯಿಡಾದಲ್ಲಿಂದು ಮನೆ-ಮನೆ ಮತಯಾಚನೆಗೂ ಮುನ್ನ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೊಮ್ಮಗಳು ವಿವಿಧ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಪಾಠಕ್ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಹಿಳಾ ಸಂಘಟನೆಗಳೊಂದಿಗೂ ಸಂವಾದ ಮಾಡಲಿದ್ದಾರೆ.
ಬೃಹತ್ ರಾಲಿಗಳಿಗೆ ಚು.ಆಯೋಗದಿಂದ ಅನುಮತಿ?
ಇಂದು ಕೇಂದ್ರ ಚುನಾವಣಾ ಆಯೋಗ ಸಭೆ ನಡೆಸಲಿದ್ದು, ಚುನಾವಣಾ ರ‍್ಯಾಲಿಗಳು, ಜನರನ್ನು ಸೇರಿಸುವ ಸಭೆಗಳಿಗೆ ಅನುಮತಿ ನೀಡುವ ಸಂಬಂಧ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಕೋವಿಡ್ 3ನೇ ಅಲೆಯಿಂದಾಗಿ ಪ್ರಸ್ತುತ ಬೃಹತ್ ರ‍್ಯಾಲಿಗಳಿಗೆ ಅನುಮತಿ ಇಲ್ಲ. ಮನೆ-ಮನೆ ಪ್ರಚಾರ ಹಾಗೂ ವರ್ಚುವಲ್ ರ‍್ಯಾಲಿಗಳಿಗೆ ಅಷ್ಟು ಅನುಮತಿ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಚುನಾವಣೆ ಪ್ರಚಾರಕ್ಕೆ ಫೆ.8ರಂದು ತೆರೆ ಬೀಳಲಿದೆ. ಫೆಬ್ರವರಿ 10ರಂದು ಇಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಫೆ.14 ರಂದು 2ನೇ ಹಂತದ ಚುನಾವಣೆ, ಫೆ.20ಕ್ಕೆ 3ನೇ, ಫೆ.23ಕ್ಕೆ 4ನೇ, ಫೆ.27ಕ್ಕೆ 5ನೇ, ಮಾರ್ಚ್ 3ಕ್ಕೆ 6ನೇ ಹಾಗೂ ಮಾರ್ಚ್ 7ಕ್ಕೆ 7ನೇ ಹಂತದ ಮತದಾನ ನಡೆಯಲಿದೆ. ಮಾರ್ಚ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ