ಲಖನೌ: ಪ್ರವಾದಿ ಮಹಮದ್ರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಬಿಜೆಪಿ ಉಚ್ಚಾಟಿತ ಮುಖಂಡೆ ನೂಪುರ್ ಶರ್ಮಾ ವಿರುದ್ಧ ನಿನ್ನೆ ಉತ್ತರಪ್ರದೇಶದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಅಪಾರ ಪ್ರಮಾಣದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ. ಗಲಭೆಕೋರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಉತ್ತರಪ್ರದೇಶ ಪೊಲೀಸರು ಹಿಂಸಾಚಾರ ಸೃಷ್ಟಿಸಿದ 227 ಜನ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಅಲ್ಲದೇ, ಕಾನೂನು ಸುವ್ಯವಸ್ಥೆ ಹಾಳು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.
ಸಿಎಂ ಸೂಚನೆಯಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್ ಇಲಾಖೆ ಪ್ರಯಾಗ್‌ರಾಜ್‌ನಲ್ಲಿ 68, ಹತ್ರಾಸ್‌ನಲ್ಲಿ 50, ಸಹರಾನ್‌ಪುರದಲ್ಲಿ 48, ಅಂಬೇಡ್ಕರ್‌ನಗರದಲ್ಲಿ 28, ಮೊರಾದಾಬಾದ್‌ನಲ್ಲಿ 25 ಮತ್ತು ಫಿರೋಜಾಬಾದ್‌ನಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ನಿನ್ನೆ ಮಸೀದಿಗಳಲ್ಲಿ ಪ್ರಾರ್ಥನೆಯ ನಂತರ ಏಕಾಏಕಿ ಪ್ರವಾದಿ ವಿರುದ್ಧದ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ವೇಳೆ ಪ್ರತಿಭಟನಾಕಾರರು ಪ್ರಯಾಗರಾಜ್ ಮತ್ತು ಸಹರಾನ್‌ಪುರದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದರು. ಇದಲ್ಲದೇ, ಪ್ರಯಾಗ್‌ರಾಜ್‌ನಲ್ಲಿ ಕೆಲವು ಬೈಕ್ಗಳು ಮತ್ತು ಗಾಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ವಾಹನವನ್ನೂ ಸುಟ್ಟು ಹಾಕಲು ಗಲಭೇಕೋರರು ಪ್ರಯತ್ನಿಸಿದ್ದರು.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದ್ದರು. ಇದೀಗ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 227 ಜನ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಗಿದೆ.
ಓದಿ: ನೂಪುರ್ ಶರ್ಮಾ ಹೇಳಿಕೆ: ಹೌರಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಪೊಲೀಸರ ಮೇಲೆ ಕಲ್ಲು ತೂರಾಟ!