ಡಿಯೋರಿಯಾ (ಉತ್ತರ ಪ್ರದೇಶ) : ಮಾಸ್ಕ್ ಧರಿಸದ ಕಾರಣ ಡಿಯೋರಿಯಾ ಮೂಲದ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 10,000 ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಲಾಗಿದೆ. ಈತ ಈ ಹಿಂದೆಯೂ ಮಾಸ್ಕ್ ಧರಿಸದೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಆಗ 1 ಸಾವಿರ ರೂ. ದಂಡ ವಿಧಿಸಲಾಗಿತ್ತು. ಆದರೆ, ಇದೀಗ ಮತ್ತೆ ಮಾಸ್ಕ್ ಇಲ್ಲದೆ ಓಡಾಡಿದ್ದು, ಪೊಲೀಸರು ಆತನಿಗೆ ₹10 ಸಾವಿರ ದಂಡ ಹಾಕಿದ್ದಾರೆ.
ಡಿಯೋರಿಯಾದ ಬರಿಯಾರ್‌ಪುರ ಪೊಲೀಸ್ ಸರ್ಕಲ್ ಪ್ರದೇಶದ ಅಮರ್ಜಿತ್ ಯಾದವ್ ಎಂಬಾತ ಏಪ್ರಿಲ್ 17 ಮತ್ತು 18 ರಂದು ಮಾಸ್ಕ್ ಇಲ್ಲದೆ ತಿರುಗಾಡಿದ್ದಾನೆ. ಸೋಮವಾರದಂದು ಲಾರ್‌ನ ಮುಖ್ಯ ಕ್ರಾಸಿಂಗ್‌ನಲ್ಲಿ ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಕೂಡಲೇ ಪೊಲೀಸರು 10,000 ರೂ. ದಂಡ ವಿಧಿಸಿದ್ದಾರೆ. ಈಗಾಗಲೇ ಏಪ್ರಿಲ್ 18ರಂದು ಆತನಿಗೆ ಎಚ್ಚರಿಕೆ ನೀಡಿ 1,000 ರೂ.ಗೆ ದಂಡ ವಿಧಿಸಿದ್ದೆವು ಎಂದು ಪೊಲೀಸರು ಹೇಳಿದ್ದಾರೆ.
ರಾಜ್ಯಾದ್ಯಂತ ಕೋವಿಡ್-19 ಪ್ರಕರಣ ಏರಿಕೆಯಾಗುತ್ತಿವೆ. ಸೋಮವಾರದಂದು 390 ಸಕ್ರಿಯ ಪ್ರಕರಣ ಡಿಯೋರಿಯಾ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವುದಾಗಿ ಡಿಯೋರಿಯ ಪೊಲೀಸ್ ವರಿಷ್ಠ ಶ್ರೀಪತಿ ಮಿಶ್ರಾ ಹೇಳಿದ್ದಾರೆ.
"ನಾವು ತಂಡಗಳನ್ನು ರಚಿಸಿದ್ದೇವೆ ಮತ್ತು ಕೋವಿಡ್-19 ಸುರಕ್ಷತಾ ಪ್ರೋಟೋಕಾಲ್ ಜಾರಿಗೊಳಿಸಲು ಜಿಲ್ಲೆಯನ್ನು ಕ್ಷೇತ್ರಗಳಾಗಿ ವಿಂಗಡಿಸಿದ್ದೇವೆ. ಪ್ರೋಟೋಕಾಲ್‌ಗಳನ್ನು ಅನುಸರಿಸದ ಜನರಿಗೆ ಮೊದಲು ಎಚ್ಚರಿಕೆ ನೀಡಲಾಗುತ್ತದೆ. ನಂತರ 1,000 ರೂ. ದಂಡ ವಿಧಿಸುತ್ತೇವೆ. ಇದರ ನಂತರವೂ ಯಾರಾದರೂ ನಿಯಮಗಳನ್ನು ಮೀರಿದರೆ, 10,000 ರೂ. ದಂಡ ವಿಧಿಸುತ್ತೇವೆ" ಎಂದು ಹೇಳಿದರು.