ಭದೋಹಿ (ಉತ್ತರ ಪ್ರದೇಶ): ಒಂದೂವರೆ ವರ್ಷಗಳ ಹಿಂದೆ ಪಾಕಿಸ್ತಾನಿ ನೌಕಾಪಡೆಯಿಂದ ಎಂಟು ಮೀನುಗಾರರೊಂದಿಗೆ ಸಿಕ್ಕಿಬಿದ್ದ ಉತ್ತರ ಪ್ರದೇಶದ ವ್ಯಕ್ತಿ ಬಿಡುಗಡೆಗಾಗಿ ಒತ್ತಾಯಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕುಟುಂಬವು ಮನವಿ ಮಾಡಿದೆ. ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಭತೇವಾರ ಗ್ರಾಮದ ನಿವಾಸಿ ನೀರಜ್ ಬಿಂದ್ ಎಂಬಾತನನ್ನು ಫೆಬ್ರವರಿ 8, 2022 ರಂದು ಎಂಟು ಮೀನುಗಾರರೊಂದಿಗೆ ಪಾಕಿಸ್ತಾನಿ ನೌಕಾಪಡೆಯು, ಗುಜರಾತ್ ಬಳಿ ಅಂತಾರಾಷ್ಟ್ರೀಯ ಜಲ ಗಡಿ ದಾಟಿದ ಸಂದರ್ಭದಲ್ಲಿ ಬಂಧಿಸಲಾಗಿತ್ತು ಎಂದು ಅವರ ತಂದೆ ಉದಯರಾಜ್ ಬಿಂದ್ ಹೇಳಿದ್ದಾರೆ.
ಅಳಲು ತೋಡಿಕೊಂಡ ನೀರಜ್ ಪತ್ನಿ ಪೂಜಾ: ನೀರಜ್‌ನನ್ನು ಇತರ ಎಂಟು ಮಂದಿಯೊಂದಿಗೆ ಬಂಧಿಸಿದ ದಿನವೇ ನೀರಜ್‌ನ ಉದ್ಯೋಗದಾತ ಕುಟುಂಬಕ್ಕೆ ಕರೆ ಮಾಡಿದ್ದನ್ನು ನೀರಜ್ ಪತ್ನಿ ಪೂಜಾ ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. ''ನೀರಜ್‌ನನ್ನು ಪಾಕಿಸ್ತಾನಿ ನೌಕಾಪಡೆ ಬಂಧಿಸಿದಾಗಿನಿಂದ, ತಾನು ಫೋನ್‌ನಲ್ಲಿ ಮಾತನಾಡುವುದನ್ನು ಬಿಟ್ಟು ಅವರ ಧ್ವನಿಯನ್ನು ಕೇಳಲಿಲ್ಲ. ತನ್ನ ಗಂಡನ ಮುಂದಿನ ಭವಿಷ್ಯವೇನು ಎಂದು ಚಿಂತಿಸುವಂತಾಗಿದೆ. ಪತಿಯ ಬಂಧನದಿಂದ ತಮಗಾದ ಘೋರ ಅನುಭವವನ್ನು ವಿವರಿಸಿದ ಪೂಜಾ, ನೀರಜ್‌ನನ್ನು ಬಂಧಿಸಿದಾಗ ತಾನು ಗರ್ಭಿಣಿಯಾಗಿದ್ದೆ. ನಂತರ ನೀರಜ್ ಇಲ್ಲದ ಸಮಯದಲ್ಲಿ ತನಗೆ ಗಂಡು ಮಗುವಾಯಿತು. ತನ್ನ ಮಗನಿಗೆ ಈಗ ಸುಮಾರು ಒಂದು ವರ್ಷ. ಆದರೆ, ಅವನು ತಂದೆಯನ್ನು ನೋಡಿಲ್ಲ ಎಂದು ನೀರಜ್ ಪತ್ನಿ ಪೂಜಾ ಅಳಲು ತೋಡಿಕೊಂಡಿದ್ದಾರೆ.
ನೀರಜ್ ಬಿಡುಗಡೆಗಾಗಿ ನಿರಂತರವಾಗಿ ಅಲೆದಾಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ನೀರಜ್ ಬಿಡುಗಡೆಗೆ ಯಾವುದೇ ಕಾರ್ಯವಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಮೂವರು ಬಾಲಕಿಯರ ಕಳ್ಳಸಾಗಣೆ ತಡೆದ ಟೊಟೊ ಚಾಲಕ: ಇಬ್ಬರು ಮಹಿಳೆಯರು ಅರೆಸ್ಟ್
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆೆ ಮನವಿ: ''ಸುಮಾರು ಒಂದೂವರೆ ವರ್ಷ ಕಳೆದಿದೆ. ನನ್ನ ಪತಿ ಪಾಕಿಸ್ತಾನದಲ್ಲಿ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಇಷ್ಟು ತಿಂಗಳು ಒಮ್ಮೆಯೂ ನಾವು ಅವರೊಂದಿಗೆ ಮಾತನಾಡಿಲ್ಲ'' ಎಂದು ಪೂಜಾ ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಕೂಡ ಪ್ರಯೋಜನವಾಗಿಲ್ಲ ಎಂದು ದೂರಿದರು. ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕುಟುಂಬದವರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ.
ಈ ವಿಚಾರ ತನ್ನ ಗಮನಕ್ಕೆ ಬಂದಿದ್ದು, ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ಭದೋಹಿ ಎಸ್ಪಿ ಡಾ.ಅನಿಲ್ ಕುಮಾರ್ ತಿಳಿಸಿದರು. ಕುಟುಂಬಕ್ಕೆ ಉತ್ತಮ ಜೀವನೋಪಾಯಕ್ಕಾಗಿ ಗುಜರಾತ್‌ಗೆ ವಲಸೆ ಬಂದ ಉದಯರಾಜ್ ಬಿಂದ್ ಅವರ ಮೂವರು ಪುತ್ರರಲ್ಲಿ ನೀರಜ್ ಬಿಂದ್ ಹಿರಿಯರು. ಒಂದೂವರೆ ವರ್ಷದಿಂದ ಈತನ ಬಂಧನದಿಂದ ಕುಟುಂಬ ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ದುಃಖ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಶಬರಿಮಲೆ ಬೆಟ್ಟಕ್ಕೆ ಅತಿಕ್ರಮ ಪ್ರವೇಶ, ಪೂಜೆ ಸಲ್ಲಿಕೆ; ಇಬ್ಬರ ಬಂಧನ