ಲಖನೌ: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿ ಹೊಸ ಮದರಸಾಗಳನ್ನು ಅನುದಾನ ಪಟ್ಟಿಯಿಂದ ಹೊರಗಿಡುವ ಪ್ರಸ್ತಾಪವನ್ನು ಅಂಗೀಕರಿಸಿದೆ. ಮದರಸಾಗಳಿಗೆ ಅನುದಾನ ನೀಡಲು ಹಿಂದಿನ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಸರ್ಕಾರ ಜಾರಿಗೆ ತಂದಿದ್ದ ನೀತಿಯನ್ನು 2016ರಲ್ಲಿ ಬಿಜೆಪಿ ರದ್ದುಗೊಳಿಸಿದೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂಡಿಸಿದ ಪ್ರಸ್ತಾವನೆಗೆ ಧ್ವನಿ ಮತದ ಒಪ್ಪಿಗೆ ದೊರೆಯಿತು.
ಇದನ್ನೂ ಓದಿ: ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ: ಯೋಗಿ ಸರ್ಕಾರದ ಮಹತ್ವದ ನಿರ್ಧಾರ
ಈ ನೀತಿ ಆಧರಿಸಿ ಮದರಸಾ ಆಡಳಿತ ಮಂಡಳಿಗಳು ಅನುದಾನ ಬಿಡುಗಡೆಗಾಗಿ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗುತ್ತಿದ್ದವು. ಅಖಿಲೇಶ್ ಸರ್ಕಾರವು 2003 ರವರೆಗೆ ಮಾನ್ಯತೆ ಪಡೆದಿದ್ದ ಮದರಸಾಗಳಿಗೆ ಅನುದಾನ ನೀಡಲು ನೀತಿ ಜಾರಿಗೆ ತಂದಿತ್ತು. ಇದರಡಿ ಸುಮಾರು 100 ಮದರಸಾಗಳಿಗೆ ಅನುದಾನ ದೊರೆತಿದೆ.
ರಾಜ್ಯಾದ್ಯಂತ ಇರುವ ಮದರಸಾಗಳ ಕಟ್ಟಡಗಳು, ಜಮೀನು, ಬಾಡಿಗೆ ಪತ್ರ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ದೈಹಿಕ ಪರೀಕ್ಷೆಗಳ ಕೇಂದ್ರಗಳ ಕಾರ್ಯನಿರ್ವಹಣೆಯ ಬಗೆಗೂ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಕೆಲವು ಜಿಲ್ಲೆಗಳಲ್ಲಿ ನಕಲಿ ಮದರಸಾಗಳ ಕುರಿತು ಸರ್ಕಾರಕ್ಕೆ ದೂರುಗಳು ಬಂದಿದ್ದು ತನಿಖೆ ನಡೆಸಲು ಸಮಿತಿ ನಿರ್ಧರಿಸಿದೆ. ಉತ್ತರ ಪ್ರದೇಶದಲ್ಲಿ 7,000ಕ್ಕೂ ಹೆಚ್ಚು ಮದರಸಾಗಳಿವೆ.