ಲಖನೌ(ಉತ್ತರ ಪ್ರದೇಶ): ರಾಜ ಪೃಥ್ವಿರಾಜ್ ಚೌಹಾಣ್ ಕುರಿತ ಐತಿಹಾಸಿಕ ಸಿನಿಮಾ 'ಸಾಮ್ರಾಟ್ ಪೃಥ್ವಿರಾಜ್'ನಲ್ಲಿ ನಟ ಅಕ್ಷಯ್ ಕುಮಾರ್ ನಟನೆ ಮಾಡಿದ್ದು, ಹಿಂದಿ ಮಾತ್ರವಲ್ಲದೇ, ತೆಲುಗು, ತಮಿಳು ಭಾಷೆಗೂ ಡಬ್ ಆಗಿರುವ ಈ ಚಿತ್ರ ನಾಳೆ (ಜೂನ್ 3) ತೆರೆಗೆ ಬರುತ್ತಿದೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೋಸ್ಕರ ಲೋಕಭವನದಲ್ಲಿ ವಿಶೇಷ ಚಿತ್ರ ಪ್ರದರ್ಶನ ಮಾಡಲಾಗಿತ್ತು.
ಚಿತ್ರ ವೀಕ್ಷಣೆ ಮಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯ್ತಿ ಘೋಷಣೆ ಮಾಡಿದ್ದಾರೆ. ಲೋಕಭವನದಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚಿತ್ರ ವೀಕ್ಷಣೆ ಮಾಡಿದ ಯೋಗಿ ಆದಿತ್ಯನಾಥ್ ನಟ ಅಕ್ಷಯ್ ಕುಮಾರ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ನಿನ್ನೆ ಸಾಮ್ರಾಟ್ ಪೃಥ್ವಿರಾಜ್ ಚಿತ್ರ ವೀಕ್ಷಣೆ ಮಾಡಿದ್ದು, ಇಂದು ಯೋಗಿ ಆದಿತ್ಯನಾಥ್ ಸಿನಿಮಾ ನೋಡಿದ್ದಾರೆ. ಈ ವೇಳೆ, ಯೋಗಿ ಸರ್ಕಾರದ ಅನೇಕ ಸಚಿವರು, ಶಾಸಕರು ಉಪಸ್ಥಿತರಿದ್ದರು. ಸಿನಿಮಾ ವೀಕ್ಷಣೆ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಅವರಿಗೆ ದೃಶ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿನಿಮಾ ವೀಕ್ಷಣೆ ಮಾಡಿದ ಬಳಿಕ ಮಾತನಾಡಿರುವ ಯೋಗಿ, ಭಾರತದ ಗತಕಾಲ ಬಿಂಬಿಸುವ ಚಿತ್ರ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ನಿರ್ದೇಶಕರು, ಎಲ್ಲ ನಟರಿಗೆ ಅಭಿನಂದಿಸುತ್ತೇನೆ. ಬಹಳ ವರ್ಷಗಳ ನಂತರ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ. ಈ ಚಿತ್ರ ನಮಗೆ ಸ್ಫೂರ್ತಿ ನೀಡಲಿದೆ ಎಂದರು.
ಚಿತ್ರದ ಬಗ್ಗೆ ನಿನ್ನೆ ಎಎನ್ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದ ಯೋಗಿ ಆದಿತ್ಯನಾಥ್, ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಬಗ್ಗೆ ಕೇವಲ 2-3 ಸಾಲು ಮಾತ್ರ ಉಲ್ಲೇಖವಾಗಿವೆ. ಆದರೆ, ಆಕ್ರಮಣಕಾರರ ಬಗ್ಗೆ ಸಾಕಷ್ಟು ಉಲ್ಲೇಖಿಸಲಾಗಿದೆ. ನಮ್ಮ ಸಂಸ್ಕೃತಿ ಮತ್ತು ಮಹಾರಾಜರ ಬಗ್ಗೆ ಏನೂ ಉಲ್ಲೇಖ ಮಾಡಿಲ್ಲ ಎಂದು ಅಕ್ಷಯ್ ಕುಮಾರ್ ತಿಳಿಸಿದರು.
ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿ ಯಶ್ ರಾಜ್ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ಚಂದ್ರಪ್ರಕಾಶ್ ದ್ವಿವೇದಿ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಕ್ಷಯ್‌ಗೆ ನಾಯಕಿಯಾಗಿ ಮಾನುಷಿ ಚಿಲ್ಲರ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಂಜಯ್ ದತ್, ಸೋನು ಸೂದ್, ಅಶುತೋಷ್ ರಾಣಾ ಕೂಡ ಈ ಸಿನಿಮಾದಲ್ಲಿ ಇದ್ದಾರೆ.