ಲಕ್ನೋ: ಮಥುರಾ ಮತ್ತು ವೃಂದಾವನವನ್ನು ಯಾತ್ರಾ ಕೇಂದ್ರಗಳೆಂದು ರಾಜ್ಯ ಸರ್ಕಾರ ಘೋಷಿಸಿದ್ದು, ಇಲ್ಲಿನ10 ಕಿಮೀ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿದೆ. ಮುಖ್ಯಮಂತ್ರಿ ಕಚೇರಿ ಈ ಘೋಷಣೆ ಮಾಡಿದೆ.
ಈ ಪ್ರದೇಶದ ವ್ಯಾಪ್ತಿಯಲ್ಲಿ 22 ನಗರ ಪಾಲಿಕೆ ವಾರ್ಡ್ ಇದ್ದು, ಇಲ್ಲಿ ಯಾವುದೇ ಮಾಂಸ ಮದ್ಯ ಮಾರಾಟ ಮಾಡುವ ಹಾಗಿಲ್ಲ. 2017 ರಲ್ಲಿ, ಯೋಗಿ ಸರ್ಕಾರವು ವೃಂದಾವನ, ನಂದಗಾಂವ್, ಗೋವರ್ಧನ್, ಗೋಕುಲ್, ಬಲದೇವ್ ಮತ್ತು ರಾಧಾಕುಂಡ್ ಅನ್ನು ಯಾತ್ರಾಸ್ಥಳವೆಂದು ಘೋಷಿಸಲು ಆದೇಶಿಸಿತ್ತು. ಹಾಗೆಯೇ ಈ ಹಿಂದೆ ಆಗಸ್ಟ್ 31 ರಂದು ಜನ್ಮಾಷ್ಟಮಿ ಸಂದರ್ಭದಲ್ಲಿ ಯೋಗಿ ಸರ್ಕಾರ ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿತ್ತು.
ಈ ಸಂಬಂಧ ಸಂತರು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಮದ್ಯ ಮತ್ತು ಮಾಂಸವನ್ನು ಇಲ್ಲಿ ಸೇವಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಇಂತಹ ಕೆಲಸವನ್ನೇ ನಂಬಿಕೊಂಡು ಬದುಕುತ್ತಿದ್ದ ವ್ಯಾಪಾರಸ್ತರಿಗೆ ಇತರೆ ಜೀವನೋಪಾಯ ಮಾರ್ಗವನ್ನು ಸೂಚಿಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಕಾರ್ಯೋನ್ಮುಖರಾಗಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.
ಮಾಂಸ ಮತ್ತು ಮದ್ಯ ವ್ಯಾಪಾರಿಗಳು 'ಮಥುರಾ ವೈಭವ' ಪುನಶ್ಚೇತನಗೊಳಿಸಲು ಹಾಲಿನ ಮಳಿಗೆಗಳನ್ನು ಸ್ಥಾಪಿಸಬೇಕು ಎಂದು ಕೂಡ ಸೂಚಿಸಿದ್ದಾರೆ.