ನವದೆಹಲಿ: ಟೆಸ್ಲಾ ಕಂಪನಿಯ ಸ್ವಯಂಚಾಲಿತ ಕಾರು ಭಾರತದಲ್ಲಿ ಮಾರಾಟಗೊಳ್ಳಲು ಇಲ್ಲಿಯವರೆಗೆ ಅವಕಾಶ ಸಿಕ್ಕಿಲ್ಲ. ಈ ವಿಚಾರವಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದಾರೆ. ಟೆಸ್ಲಾಗೆ ಸ್ವಾಗತ, ಆದರೆ, ಭಾರತದಲ್ಲಿ ಕಾರು ಮಾರಾಟ ಮಾಡಲು ಚೀನಾದಲ್ಲಿ ಅವುಗಳನ್ನು ತಯಾರು ಮಾಡುವ ನಿರ್ಧಾರ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ನಿತಿನ್ ಗಡ್ಕರಿ, ಎಲೋನ್ ಮಸ್ಕ್ ಭಾರತದಲ್ಲಿ ಕಾರು ತಯಾರಿಸಲು ಸಿದ್ಧವಾಗಿದ್ದರೆ, ನಮ್ಮಲ್ಲಿ ಎಲ್ಲ ರೀತಿಯ ಸಾಮರ್ಥ್ಯ, ತಂತ್ರಜ್ಞಾನವಿದೆ. ಭಾರತದಲ್ಲೇ ಕಾರು ತಯಾರಿಸಿ ಎಂದು ನಾವು ಅವರಿಗೆ ಮನವಿ ಮಾಡುತ್ತೇವೆ. ಆದರೆ, ಅವರು ಚೀನಾದಲ್ಲಿ ಕಾರು ಉತ್ಪಾದಿಸಿ, ಭಾರತದಲ್ಲಿ ಮಾರಾಟ ಮಾಡಲು ಬಯಸಿದರೆ, ಅದಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 6-12 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್; 5-12 ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆ
ಭಾರತದಲ್ಲಿ ಟೆಸ್ಲಾ ಕಾರು ಮಾರಾಟ ಮಾಡಲು ಕಂಪನಿಗೆ ಸಾಧ್ಯವಾಗಿಲ್ಲ. ಕಾರಿನ ಮೇಲಿನ ಸುಂಕ ಕಡಿತಗೊಳಿಸುವಂತೆ ಸುಮಾರು ಒಂದು ವರ್ಷದಿಂದಲೂ ನವದೆಹಲಿಯಲ್ಲಿ ಅಧಿಕಾರಿಗಳ ಬಳಿ ಲಾಬಿ ಮಾಡಿದೆ ಎಂದು ಇದೇ ವೇಳೆ ತಿಳಿಸಿದರು. ಟೆಸ್ಲಾ ಕಂಪನಿ ಭಾರತದಲ್ಲಿ ಹೂಡಿಕೆ ಮಾಡುವ ದೃಢ ನಿರ್ಧಾರ ಕೈಗೊಂಡರೆ ಅದಕ್ಕೆ ನಾವು ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿದ್ಧವಾಗಿದ್ದೇವೆ. ಇದು ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ದೃಷ್ಟಿಕೋನಕ್ಕೂ ಸಹಕಾರಿಯಾಗಲಿದೆ ಎಂದರು.