ಕೂಚ್ಬೆಹಾರ್ : ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್ ಪ್ರಮಾಣಿಕ್ ಅವರ ಕಾರಿನ ಮೇಲೆ ದಾಳಿ ನಡೆದಿರುವ ಘಟನೆ ಕೂಚ್ ಬೆಹಾರ್‌ನ ದಿನ್ಹಟಾದ ಬುರಿರ್‌ಹತ್ ಪ್ರದೇಶದಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಕೇಂದ್ರ ಸಚಿವರ ಕಾರಿನ ಗಾಜು ಜಖಂಗೊಂಡಿದೆ. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮೇಲೆ ಕಲ್ಲು ತೂರಾಟ ನಡೆಸಿ ಬಾಂಬ್ ದಾಳಿ ನಡೆಸಿದ್ದಾರೆ ಎಂದು ಪ್ರಮಾಣಿಕ್ ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ನಿಸಿತ್ ಪ್ರಮಾಣಿಕ್, ಪೊಲೀಸರಿಗೆ ಮಾಹಿತಿ ನೀಡಿ ನಾನು ಆ ಪ್ರದೇಶಕ್ಕೆ ತೆರಳಿದ್ದೆ. ಈ ರಾಜ್ಯದಲ್ಲಿ ಕೇಂದ್ರ ಸಚಿವರೂ ಅಸುರಕ್ಷಿತರಾಗಿದ್ದು, ಇಲ್ಲಿನ ಜನಸಾಮಾನ್ಯರ ಪರಿಸ್ಥಿತಿಯನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದು ಕಿಡಿಕಾರಿದ್ದಾರೆ. ಬಂಗಾಳದ ಜನರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಈ ರಾಜಕೀಯ ಪರಿಸ್ಥಿತಿ ಮುಂದುವರಿದರೆ ಬಂಗಾಳದ ಪ್ರಜಾಪ್ರಭುತ್ವವು ಛಿದ್ರವಾಗುತ್ತದೆ. ಕಲ್ಲು ತೂರಾಟ ಮಾಡುವವರು ಮತ್ತು ಬಾಂಬ್ ಎಸೆದವರನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಎಂದು ಪ್ರಮಾಣಿಕ್ ಆರೋಪಿಸಿದ್ದಾರೆ. ಘಟನೆ ಬಳಿಕ ಈ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕೂಚ್ ಬೆಹಾರ್‌ನ ದಿನ್ಹಟಾದಲ್ಲಿ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತನನ್ನು ಭೇಟಿ ಮಾಡಲು ಪ್ರಾಮಾಣಿಕ್ ತೆರಳುತ್ತಿದ್ದರು. ಈ ವೇಳೆ ಟಿಎಂಸಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ. ಈ ವೇಳೆ ಬಾಂಬ್ ದಾಳಿ ಮತ್ತು ಕಲ್ಲುಗಳ ತೂರಾಟದ ಹೊರತಾಗಿ ಟಿಎಂಸಿ ಕಾರ್ಯಕರ್ತರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಬೇಕಾಯಿತು. ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಕೂಚ್ ಬೆಹಾರ್‌ನ ಹಲವಾರು ಪೊಲೀಸ್ ಠಾಣೆಗಳಿಂದ ಬುರಿರ್‌ಹತ್‌ಗೆ ಪಡೆಗಳನ್ನು ಕರೆತರಲಾಗಿತ್ತು.
ಕಳೆದ ವಾರ, ಹಿರಿಯ ನಾಯಕ ಉದಯನ್ ಗುಹಾ ನೇತೃತ್ವದಲ್ಲಿ ಟಿಎಂಸಿ ಕಾರ್ಯಕರ್ತರು ಕೂಚ್ ಬೆಹಾರ್‌ನಲ್ಲಿರುವ ಪ್ರಮಾಣಿಕ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಪ್ರತಿಭಟನೆಯನ್ನೂ ನಡೆಸಿತ್ತು.
ಇದನ್ನೂ ಓದಿ : ಅಕ್ರಮ ಶಸ್ತ್ರಾಸ್ತ್ರ ಪ್ರಕರಣ : ಐಟಿಬಿಪಿ ಅಧಿಕಾರಿಯ ಪುತ್ರ ಸೇರಿ ನಾಲ್ವರ ಬಂಧನ