ಮುಂಬೈ: ಕೇಂದ್ರ ಸರ್ಕಾರದ ಸೂಚನೆಯಂತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿ ಏಳು ಆಸ್ತಿಗಳನ್ನು ಮಹಾರಾಷ್ಟ್ರ ಸರ್ಕಾರ ನವೆಂಬರ್ 10ರಂದು ಹರಾಜು ಹಾಕಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ದ ಸ್ಮಗ್ಲರ್ಸ್ ಅಂಡ್ ಫಾರಿನ್ ಎಕ್ಸ್ಚೇಂಜ್ ಮ್ಯಾನಿಪುಲೇಟರ್ಸ್ ಆ್ಯಕ್ಟ್ನ ಪ್ರಾಧಿಕಾರಗಳು ದಾವೂದ್ ಇಬ್ರಾಹಿಂನ ಆಸ್ತಿಗಳನ್ನು ಹರಾಜು ಹಾಕಲಿವೆ. ಈ ಮೊದಲು ರತ್ನಗಿರಿ ಜಿಲ್ಲೆಯ ಲೋಟ್ ಹಾಗೂ ಖೇಡ್ನ ಆಸ್ತಿ ಹಾಗೂ ಬಂಗಲೆಯನ್ನು ಹರಾಜು ಹಾಕಲು ಆದೇಶಿಸಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಹರಾಜು ಹಾಕುವ ಪ್ರಕ್ರಿಯೆ ವಿಳಂಬವಾಗಿತ್ತು.
ಈಗ ನವೆಂಬರ್ 10ರಂದು ಮುಂಬೈನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಈಗಾಗಲೇ ಅಧಿಕಾರಿಗಳು ಆಸ್ತಿಯ ಸಮೀಕ್ಷೆ ಮಾಡಿದ್ದು, ಹಲವು ಕಡೆಗಳಲ್ಲಿ ಹರಾಜಿನ ಆಸ್ತಿಯನ್ನು ಗುರುತಿಸಿದ್ದಾರೆ. ಅನೇಕ ಮಂದಿ ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತಕ್ಕೆ ಬೇಕಾಗಿರುವ ದಾವೂದ್ ಇಬ್ರಾಹಿಂ ನಮ್ಮ ದೇಶದ ಪ್ರಜೆಯಲ್ಲ ಎಂದು ಡೊಮಿನಿಕಾ ಸರ್ಕಾರ ಕೆಲವು ತಿಂಗಳ ಹಿಂದೆ ಸ್ಪಷ್ಟನೆ ನೀಡಿತ್ತು. ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಅವಿತುಕೊಂಡಿರುವ ಬಗ್ಗೆಯೂ ಕೂಡ ಸಂಶಯ ವ್ಯಕ್ತವಾಗಿದೆ.