ಉದಯಪುರ(ರಾಜಸ್ಥಾನ್): ವೇಗವಾಗಿ ಚಲಿಸುತ್ತಿದ್ದ ಬೊಲೆರೋವೊಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ನ್ಯಾ.ರಸ್ತೋಗಿ ಅವರು ದಾಬೋಕ್ ವಿಮಾನ ನಿಲ್ದಾಣದಿಂದ ಸರ್ಕ್ಯೂಟ್ ಹೌಸ್‌ಗೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಜಯ್ ರಸ್ತೋಗಿ ಶುಕ್ರವಾರ ಉದಯಪುರದ ದಾಬೋಕ್ ವಿಮಾನ ನಿಲ್ದಾಣದಿಂದ ಸರ್ಕ್ಯೂಟ್ ಹೌಸ್‌ಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಬೊಲೆರೋ ಕಾರೊಂದು ಇವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಆದರೆ, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.
ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಚಾಲಕ ಬೊಲೆರೋ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ, ಭದ್ರತೆಯ ನಡುವೆಯೂ ಉದಯಪುರ ದಬೋಕ್ ವಿಮಾನ ನಿಲ್ದಾಣದಿಂದ ಸರ್ಕ್ಯೂಟ್ ಹೌಸ್‌ಗೆ ಬರುತ್ತಿದ್ದಾಗ ಅಪರಿಚಿತ ಬೊಲೆರೊ ವಾಹನ ಬೆಂಗಾವಲು ಪಡೆಗೆ ಹೇಗೆ ಡಿಕ್ಕಿ ಹೊಡೆದಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳು ಸುರಕ್ಷಿತವಾಗಿ ಉದಯಪುರದ ಸರ್ಕ್ಯೂಟ್ ಹೌಸ್ ತಲುಪಿದ್ದಾರೆ.
ಸೆಪ್ಟೆಂಬರ್ 17(ಇಂದು) ಮತ್ತು 18 ರಂದು ಯೂನಿಯನ್ ಆಫ್ ಇಂಡಿಯಾ ಕೌನ್ಸೆಲಿಂಗ್‌ನ ಪಶ್ಚಿಮ ವಲಯದ ಎರಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಲು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳು ಉದಯಪುರಕ್ಕೆ ಆಗಮಿಸಿದ್ದಾರೆ. ಈ ಎರಡು ದಿನಗಳ ಸಮ್ಮೇಳನದಲ್ಲಿ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶದ ಕೇಂದ್ರ ಸರ್ಕಾರದ ಎಲ್ಲಾ ಸಂಸ್ಥೆಗಳು ಮತ್ತು ಇಲಾಖೆಗಳ 300 ಕ್ಕೂ ಹೆಚ್ಚು ಸರ್ಕಾರಿ ಮಂಡಳಿಗಳು ಭಾಗವಹಿಸಲಿವೆ.