ಡೆಹ್ರಾಡೂನ್ (ಉತ್ತರಾಖಂಡ): ಪೊಲೀಸ್ ಮಹಾನಿರ್ದೇಶಕರ ಫೇಸ್ಬುಕ್ ಐಡಿಯನ್ನೇ ನಕಲು ಮಾಡಿ ಹಣಕ್ಕೆ ಒತ್ತಾಯಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಉತ್ತರಾಖಂಡದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಡಿಜಿಪಿ ಅಶೋಕ್ ಕುಮಾರ್ ಅವರ ಫೇಸ್ಬುಕ್ ಐಡಿಯನ್ನು ಸೈಬರ್ ಕಳ್ಳರು ನಕಲಿಸಿದ್ದಾರೆ.
ಡಿಜಿಪಿಯ ಫೇಸ್ಬುಕ್ ಐಡಿಯನ್ನು ನಕಲು ಮಾಡಿದ ಸೈಬರ್ ಕಳ್ಳರು 10 ಸಾವಿರ ರೂಪಾಯಿಗೆ ಡೆಹ್ರಾಡೂನ್ ನಿವಾಸಿ ತನುಜ್ ಒಬೆರಾಯ್ ಅವರಿಗೆ ಸೋಮವಾರ ಒತ್ತಾಯಿಸಿದ್ದು, ಅನುಮಾನಗೊಂಡ ತನುಜ್ ಒಬೇರಾಯ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗಳು ಚಾಣಾಕ್ಷರಾಗಿದ್ದು ಬಿಹಾರ್, ಜಾರ್ಖಂಡ್ ಅಥವಾ ರಾಜಸ್ಥಾನದಿಂದ ವಂಚನೆ ಎಸಗುತ್ತಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣದ ತನಿಖೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ ಎಂದು ಡಿಜಿಪಿ ಕೇಂದ್ರ ಕಚೇರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಆರೋಪಿಗಳ ಪತ್ತೆಗೆ ಬಿಹಾರ, ಜಾರ್ಖಂಡ್ ಮತ್ತು ರಾಜಸ್ಥಾನದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಮಾಡುವ ಭರವಸೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಕಾರು-ಟ್ರಕ್ ಮಧ್ಯೆ ಭೀಕರ ಅಪಘಾತ: 10 ಮಂದಿ ಸ್ಥಳದಲ್ಲೇ ಸಾವು
ಈ ಪ್ರಕರಣದ ನಂತರ ಸೈಬರ್ ಪೊಲೀಸರು ಕಾರ್ಯೋನ್ಮುಖರಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ದಾಖಲಾಗಿರುವ ಸೈಬರ್ ಸಂಬಂಧಿತ ಅಪರಾಧಗಳನ್ನು ಶೀಘ್ರವೇ ಪರಿಹರಿಸಲು ಮುಂದಾಗಿದ್ದಾರೆ.