ಮಹಾರಾಷ್ಟ್ರ: ವಿನಾಯಕ ಸಾವರ್ಕರ್ ಅವರನ್ನು ಅವಮಾನಿಸದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ, ಸಾವರ್ಕರ್ ಅವರನ್ನು ಅವಮಾನಿಸುವುದರಿಂದ ವಿರೋಧ ಪಕ್ಷದ ಮೈತ್ರಿಯಲ್ಲಿ "ಬಿರುಕು" ಸೃಷ್ಟಿಯಾಗುತ್ತದೆ ಎಂದು ಗುಡುಗಿದ್ದಾರೆ.
ಮಾಲೆಗಾಂವ್ನಲ್ಲಿ ಭಾನುವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, "ಹಿಂದುತ್ವ ಸಿದ್ಧಾಂತವಾದಿ ವಿ.ಡಿ.ಸಾವರ್ಕರ್ ಅವರನ್ನು ನಾವು ನಮ್ಮ ಆರಾಧ್ಯ ದೈವವೆಂದು ಪರಿಗಣಿಸುತ್ತೇವೆ. ಅವರು 14 ವರ್ಷಗಳ ಕಾಲ ಅಂಡಮಾನ್ ಜೈಲಿನಲ್ಲಿ ಊಹಿಸಲಾಗದ ಚಿತ್ರಹಿಂಸೆ ಅನುಭವಿಸಿದ್ದಾರೆ. ಸಾವರ್ಕರ್ ತ್ಯಾಗದ ಪ್ರತಿರೂಪ. ಅವರಿಗೆ ಅವಮಾನ ಮಾಡಿದ್ರೆ ಸಹಿಸುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : 'Dis'Qualified MP' ಎಂದು ಟ್ವಿಟರ್, ಫೇಸ್ಬುಕ್ ಅಪ್ಡೇಟ್ ಮಾಡಿದ ರಾಹುಲ್ ಗಾಂಧಿ
"ವೀರ್ ಸಾವರ್ಕರ್ ನಮ್ಮ ದೇವರು. ದೇವರನ್ನು ಅವಮಾನಿಸುವುದನ್ನು ನಾವು ಸಹಿಸುವುದಿಲ್ಲ. ಅವರಿಗೆ ಅಗೌರವ ತೋರಿದರೆ ನಾವು ಹೋರಾಡಲು ಸಿದ್ಧ. ರಾಹುಲ್ ಗಾಂಧಿಯವರು ಸಾವರ್ಕರ್ ಅವರನ್ನು ಕೀಳಾಗಿ ಕಾಣುವುದನ್ನು ಮುಂದುವರಿಸಿದ್ರೆ ವಿರೋಧ ಪಕ್ಷದ ಮೈತ್ರಿಯಲ್ಲಿ ಬಿರುಕು ಉಂಟಾಗುತ್ತದೆ. ಪ್ರಜಾಪ್ರಭುತ್ವವದ ರಕ್ಷಣೆಗಾಗಿ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಮೈತ್ರಿ ಸರ್ಕಾರ ರಚನೆ ಮಾಡಲಾಗಿದೆ. ರಾಹುಲ್ ಗಾಂಧಿಯವರು ಉದ್ದೇಶಪೂರ್ವಕವಾಗಿ ಇಂತಹ ಹೇಳಿಕೆ ನೀಡುವ ಮೂಲಕ ಜನರನ್ನು ಪ್ರಚೋದಿಸುತ್ತಿದ್ದಾರೆ" ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರಾಹುಲ್ ಸಂಸತ್ ಸ್ಥಾನ ಅನರ್ಹತೆ ಖಂಡಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಕೈ ನಾಯಕರ ಪ್ರತಿಭಟನೆ
ಹಿಂಡೆನ್‌ಬರ್ಗ್ ವರದಿಯ ಕುರಿತು ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದನ್ನು ಶ್ಲಾಘಿಸಿದ ಠಾಕ್ರೆ, "ಅದಾನಿ ಸಂಸ್ಥೆಗೆ 20,000 ಕೋಟಿ ರೂ ಎಲ್ಲಿಂದ ಬಂದಿದೆ ಎಂದು ಪ್ರಧಾನಿ ಉತ್ತರಿಸಬೇಕಾಗಿತ್ತು. ಮೋದಿ ಅಂದ್ರೆ ಭಾರತವಲ್ಲ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರೆ. ಮೋದಿಯನ್ನು ಪ್ರಶ್ನಿಸುವುದು ಭಾರತವನ್ನು ಅವಮಾನಿಸಿದಂತಲ್ಲ" ಎಂದು ಇದೇ ವೇಳೆ ಉದ್ಧವ್ ಹೇಳಿದರು.
ಇದನ್ನೂ ಓದಿ : ವೀರ್ ಸಾವರ್ಕರ್ರಂತೆ ನಾನು ಕ್ಷಮೆ ಕೇಳುವುದಿಲ್ಲ: ರಾಹುಲ್ ಗಾಂಧಿ ಗರಂ
ರಾಹುಲ್ ಗಾಂಧಿ ಹೇಳಿಕೆ ಏನು?: ಸಂಸತ್ತಿನಿಂದ ಅನರ್ಹವಾದ ಒಂದು ದಿನದ ಬಳಿಕ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಚೇರಿಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಳಿಕ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನೀವು ಏಕೆ ಕ್ಷಮೆ ಯಾಚಿಸಲಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಗಾಂಧಿ, ಕ್ಷಮೆ ಕೇಳುವುದಿಲ್ಲ. ಸತ್ಯಕ್ಕಾಗಿ ಹೋರಾಡುವುದು ಹಾಗೂ ದೇಶದ ಪ್ರಜಾಪ್ರಭುತ್ವವನ್ನ ರಕ್ಷಿಸುವುದು ನನ್ನ ಗುರಿ. ನಾನು ಎಲ್ಲಾ ಅಡೆತಡೆಗಳನ್ನು ಲೆಕ್ಕಿಸದೆ ಹೋರಾಟ ಮುಂದುವರಿಸುತ್ತೇನೆ" ಎಂದು ಹೇಳಿದ್ದರು.
ಇದನ್ನೂ ಓದಿ : ಸಾವರ್ಕರ್ ದೇಶದ ಆದರ್ಶ: ರಾಹುಲ್ ಹೇಳಿಕೆಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಆಕ್ರೋಶ