ಉದಯಪುರ(ರಾಜಸ್ಥಾನ): ಮತಾಂಧರಿಂದ ಅತ್ಯಂತ ಭಯಾನಕ ರೀತಿಯಲ್ಲಿ ಹತ್ಯೆಗೀಡಾದ ಟೈಲರ್ ಕನ್ಹಯ್ಯಲಾಲ್ ಅವರ ಪತ್ನಿ ಯಶೋದಾ, ಹಂತಕರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. "ಇವತ್ತು ನನ್ನ ಗಂಡನ ಕೊಲೆ ಮಾಡಿರುವ ಇವರು, ನಾಳೆ ಇನ್ಯಾರನ್ನೋ ಕೊಲ್ಲುತ್ತಾರೆ" ಎಂದು ಹೇಳುತ್ತಾ ಕಣ್ಣೀರು ಸುರಿಸಿದರು.
ರಾಜಸ್ಥಾನದ ಉದಯಪುರದಲ್ಲಿ ನಿನ್ನೆ ನಡೆದ ಟೈಲರ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಐಸಿಸ್ ಮಾದರಿಯಲ್ಲಿ ಕನ್ಹಯ್ಯಲಾಲ್ ಹತ್ಯೆ ನಡೆದಿತ್ತು. ಮನೆಯ ಪ್ರಮುಖ ಸದಸ್ಯನನ್ನು ಕಳೆದುಕೊಂಡಿರುವ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಘಟನೆಯ ಬಗ್ಗೆ ಪತ್ನಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. "ನನ್ನ ಗಂಡನಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದ್ದವು. ಅಂಗಡಿಗೆ ಬಂದು ಕೈ ಕತ್ತರಿಸುವಂತೆ ಬೆದರಿಸುತ್ತಿದ್ದರು. ಹೀಗಾಗಿ ನಾವು ಸಹ ಮನೆಯಿಂದ ಹೊರಬಂದಿರಲಿಲ್ಲ. ಮಂಗಳವಾರದಂದು ಮನೆಯಿಂದ ಊಟದ ಬಾಕ್ಸ್ ತೆಗೆದುಕೊಂಡು ಅವರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಈ ಕೃತ್ಯ ನಡೆಸಿದ್ದಾರೆ" ಎಂದು ಅವರು ವಿವರಿಸಿದರು.
"ಹಂತಕರನ್ನು ಗಲ್ಲಿಗೇರಿಸಿ": ಸರ್ಕಾರ ನಮಗೆ ಪರಿಹಾರ ನೀಡಿದೆ. ಆದರೆ, ಅದರಿಂದ ಏನು ಮಾಡುವುದು ಎಂದು ಪ್ರಶ್ನೆ ಮಾಡಿರುವ ಯಶೋದಾ, "ನನ್ನ ಮಕ್ಕಳಿಗೆ ಅವರ ತಂದೆ ಇರುವುದಿಲ್ಲ. ಹಂತಕರನ್ನು ಗಲ್ಲಿಗೇರಿಸಿ. ಇಂದು ನನ್ನ ಗಂಡನನ್ನು ಕೊಂದಿದ್ದಾರೆ. ನಾಳೆ ಇತರರನ್ನೂ ಕೊಲ್ಲುತ್ತಾರೆ" ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು. ಇದೇ ವೇಳೆ ಹಂತಕರ ಕುಟುಂಬದ ಇತರೆ ಸದಸ್ಯರಿಗೂ ಸಹ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಹಂಚಿಕೊಂಡ ಕಾರಣಕ್ಕೆ ಇಬ್ಬರು ಮತಾಂಧರಿಂದ ಕೊಲೆಗೀಡಾದ ರಾಜಸ್ಥಾನದ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ ಇಂದು ನಡೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಂತ್ಯಸಂಸ್ಕಾರದ ವೇಳೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.