ಮುಜಾಫರ್‌ಪುರ (ಬಿಹಾರ): ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆಯಲ್ಲಿದ್ದ ಫ್ರಿಡ್ಜ್ ಸಿಡಿದು ಬಾಲಕಿ ಮತ್ತು ಮಹಿಳೆ ಜೀವಂತವಾಗಿ ಬೆಂಕಿಗೆ ಆಹುತಿಯಾದ ದುರ್ಘಟನೆ ಬಿಹಾರದ ಮುಜಾಫುರ್ಪುರದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆಗೂ ಹಾನಿಯುಂಟಾಗಿದೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಧ್ಯರಾತ್ರಿ ಒಂದು ಗಂಟೆ ಸುಮಾರಿನಲ್ಲಿ ಫ್ರಿಡ್ಜ್ ಸ್ಫೋಟವಾಗಿದೆ. ಈ ವೇಳೆ ಮನೆಯಲ್ಲಿ ಮಲಗಿದ್ದ ಬಾಲಕಿ ಮತ್ತು ಆಕೆಯ ಅತ್ತಿಗೆಗೆ ಬೆಂಕಿ ಹೊತ್ತಿಕೊಂಡಿದೆ. ಇಬ್ಬರೂ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಣ್ಣೆದುರು ಮಗಳು ಮತ್ತು ಸೊಸೆ ಬೆಂಕಿಯಲ್ಲಿ ಬೆಂದಿದ್ದನ್ನು ಮನೆಯ ಯಜಮಾನಿ ಕಂಡಿದ್ದಾರೆ. ದೊಡ್ಡ ಸದ್ದು ಮತ್ತು ಕುಟುಂಬಸ್ಥರ ಆಕ್ರಂದನದಿಂದಾಗಿ ಸುತ್ತಲಿನ ಜನರು ಜಮಾಯಿಸಿದ್ದರು. ಸ್ಫೋಟದಿಂದಾಗಿ ಮನೆಗೂ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಲಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ದುರಂತ: ಮನೆಯಲ್ಲಿ ದಿನಬಳಕೆಗೆ ಇದ್ದ ಫ್ರಿಡ್ಜ್ ರಾತ್ರಿ ಏಕಾಏಕಿ ಸ್ಫೋಟಗೊಂಡಿದ್ದು, ಭಾರಿ ಆತಂಕ ಉಂಟುಮಾಡಿದೆ. ಶಾರ್ಟ್ ಸರ್ಕ್ಯೂಟ್ ಆಗಿದ್ದೇ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ. ಸ್ಫೋಟದಿಂದ ಮನೆಗೂ ಬೆಂಕಿ ಹೊತ್ತಿಕೊಂಡಿದ್ದು, ವಸ್ತುಗಳು ಸುಟ್ಟು ಭಸ್ಮವಾಗಿವೆ. ದೊಡ್ಡ ಸದ್ದು ಕೇಳಿ ನೆರೆಹೊರೆಯವರು ಬಂದು ವೀಕ್ಷಿಸಿ ಕುಟುಂಬಸ್ಥರ ನೆರವಿಗೆ ಬಂದಿದ್ದಾರೆ. ಉಳಿದವರನ್ನು ರಕ್ಷಿಸಿ, ಬೆಂಕಿಯನ್ನು ನಂದಿಸಿದ್ದಾರೆ.
ನವವಿವಾಹಿತೆ ಸಾವು: ಸ್ಫೋಟದಲ್ಲಿ ಸಾವಿಗೀಗಾಡದ ಮಹಿಳೆಗೆ 3 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಮನೆಯ ನೀರಜ್ ಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ತುಂಬು ಜೀವನ ನಡೆಸಬೇಕಾಗಿದ್ದ ನವವಧು ಅಚಾನಕ್ಕಾಗಿ ನಡೆದ ದುರಂತದಲ್ಲಿ ಸಜೀವ ದಹನವಾಗಿದ್ದಾಳೆ.
ಮಾಹಿತಿ ತಿಳಿದ ಪೊಲೀಸರು ಘಟನೆನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್ ಅವಘಡದಿಂದಾಗಿ ದುರಂತ ಸಂಭವಿಸಿದೆ. ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಉಳಿದವರನ್ನು ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ಲಿಖಿತ ದೂರು ದಾಖಲಾಗಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಸರಯ್ಯ ಪೊಲೀಸ್ ಠಾಣೆಯ ಕುಮಾರ್ ಚಂದನ್ ತಿಳಿಸಿದ್ದಾರೆ.
ಪಟಾಕಿ ಕಾರ್ಖಾನೆ ಸ್ಫೋಟ: ಪಶ್ಚಿಮಬಂಗಾಳದ ಉತ್ತರದ 24 ಪರಗಣ ಜಿಲ್ಲೆಯಲ್ಲಿ ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿ, ಮಹಿಳೆ ಸೇರಿದಂತೆ 6 ಮಂದಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಸ್ಫೋಟದ ತೀವ್ರತೆಗೆ ದೇಹಗಳು ಕಾರ್ಖಾನೆಯಿಂದ ಹಾರಿ ಹೊರಭಾಗದಲ್ಲಿರುವ ಮರದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದತ್ತಪುಕುರ್ ಪ್ರದೇಶದಲ್ಲಿನ ಈ ಕಾರ್ಖಾನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಆರೋಪವಿದೆ. ಗಣೇಶ ಚತುರ್ಥಿ ಮತ್ತು ದಸರಾ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಟಾಕಿಗಳ ತಯಾರಿಕೆ ಕಾರ್ಯ ನಡೆಯುತ್ತಿದೆ. ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಡಿಮದ್ದು, ಪಟಾಕಿಗಳನ್ನು ದಾಸ್ತಾನು ಮಾಡಲಾಗಿದ್ದು, ಇವು ಸ್ಫೋಟಗೊಂಡು ದುರಂತ ಸಂಭವಿಸಿತು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 8 ತಿಂಗಳಲ್ಲಿ 73 ರೈತರ ಆತ್ಮಹತ್ಯೆ; 5 ವರ್ಷದಲ್ಲಿ ಸಾವಿನ ಹಾದಿ ಹಿಡಿದವರು 446 ಮಂದಿ!