ಹೈದರಾಬಾದ್, ತೆಲಂಗಾಣ: ದರ್ಭಾಂಗಾ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಭಯೋತ್ಪಾದಕ ಸಹೋದರರನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹೈದರಾಬಾದ್ನ ನಾಂಪಲ್ಲಿಯಲ್ಲಿ ಬಂಧಿಸಿದ್ದು, ಇವರಿಬ್ಬರೂ ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು ಎಂದು ಎನ್ಐಎ ಮಾಹಿತಿ ನೀಡಿದೆ.
ದರ್ಭಾಂಗಾ ರೈಲ್ವೆ ನಿಲ್ದಾಣದಲ್ಲಿ ಇದೇ ಜೂನ್ 17ರಂದು ಪಾರ್ಸೆಲ್ವೊಂದರಲ್ಲಿ ಬಾಂಬ್ ಸ್ಫೋಟ ನಡೆದಿದ್ದು, ಸಿಕಂದರಬಾದ್ನಿಂದ ಆ ಪಾರ್ಸೆಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಎನ್ಐಎ ಇಮ್ರಾನ್ ಖಾನ್ ಮತ್ತು ಮೊಹಮದ್ ನಾಸಿರ್ ಖಾನ್ ಎಂಬ ಸಹೋದರ ಭಯೋತ್ಪಾದಕರನ್ನು ಬಂಧಿಸಿದೆ.
ಈ ಇಬ್ಬರೂ ದೇಶಾದ್ಯಂತ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲು, ಅನೇಕ ಕೃತ್ಯಗಳಿಗೆ ಸಂಚು ರೂಪಿಸಿದ್ದರು ಎಂದು ರಾಷ್ಟ್ರೀಯ ತನಿಖಾ ದಳ ಮಾಹಿತಿ ನೀಡಿದೆ. ಇದರ ಜೊತೆಗೆ ಮೊಹಮದ್ ನಾಸಿರ್ ಖಾನ್ 2012ರಲ್ಲಿ ಪಾಕಿಸ್ತಾನಕ್ಕೆ ತೆರಳಿ, ಲಷ್ಕರ್ -ಇ- ತೋಯ್ಬಾದಿಂದ ತರಬೇತಿ ಪಡೆದಿದ್ದನು. ಐಇಡಿ ಬಾಂಬ್ಗಳ ತಯಾರಿಕೆಯಲ್ಲಿ ನಿಪುಣನಾಗಿದ್ದ ಆತ ತನ್ನ ಸಹೋದರ ಇಮ್ರಾನ್ ಜೊತೆ ಸೇರಿ ಬಾಂಬ್ಗಳ ತಯಾರಿಸುತ್ತಿದ್ದ ಎಂದು ತಿಳಿದುಬಂದಿದೆ.
ಬಟ್ಟೆಗಳೊಂದಿಗೆ ಬಾಂಬ್ ಪಾರ್ಸೆಲ್..
ಬಾಂಬ್ ತಯಾರಿಸಿದ ಭಯೋತ್ಪಾದಕರು ಬಟ್ಟೆಗಳೊಂದಿಗೆ ಅದನ್ನು ಪಾರ್ಸೆಲ್ ಮಾಡಿದ್ದರು. 55 ಕೆಜಿ ಇದ್ದ ಸೀರೆಗಳೊಂದಿಗೆ ಆ ಬಾಂಬ್ ಅನ್ನು ಇಡಲಾಗಿತ್ತು. ಬಿಹಾರದ ದರ್ಭಾಂಗಾಗೆ ಇಲ್ಲದ ಅಡ್ರೆಸ್ ಅನ್ನು ಪಾರ್ಸೆಲ್ ಮೇಲೆ ನೀಡಲಾಗಿತ್ತು. ಸುಫಿಯಾನ್ ಎಂಬ ಹೆಸರಿನಲ್ಲಿ ನಕಲಿ ಪ್ಯಾನ್ ಕಾರ್ಡ್ ತೋರಿಸಿ, ನಕಲಿ ಮೊಬೈಲ್ ನಂಬರ್ ಕೊಟ್ಟು ಪಾರ್ಸೆಲ್ ಮಾಡಲಾಗಿತ್ತು. ಈ ಬಾಂಬ್ ಬ್ಲಾಸ್ಟ್ ಆಗಿತ್ತಾದರೂ, ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ.
ಇದನ್ನೂ ಓದಿ: ಮೋಜಿಗಾಗಿ ಮಾದಕವಸ್ತು ಮಾರಾಟ: ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ಗಳು ಅರೆಸ್ಟ್
20 ವರ್ಷಗಳ ಹಿಂದೆ..
ಭಯೋತ್ಪಾದಕನಾದ ನಾಸಿರ್ ಮೂಲತಃ ಉತ್ತರಪ್ರದೇಶದ ಖೈರಾನಾದವನಾಗಿದ್ದು, 20 ವರ್ಷಗಳ ಹಿಂದೆ ಹೈದರಾಬಾದ್ಗೆ ಬಂದು ಆಸೀಫ್ ನಗರದಲ್ಲಿ ವಾಸವಿದ್ದನು.ಹೈದರಾಬಾದ್ನಲ್ಲಿ ಟೆಕ್ಸ್ಟೈಲ್ ವ್ಯವಹಾರ ಮಾಡುತ್ತಿದ್ದ ಮಹಿಳೆಯನ್ನು ನಾಸಿರ್ ವಿವಾಹವಾಗಿದ್ದನು. ಒಂದು ವರ್ಷದ ಹಿಂದೆ ನಾಸಿರ್ ಸಹೋದರ ಇಮ್ರಾನ್ ಹೈದರಾಬಾದ್ಗೆ ಬಂದು ಆಸೀಫ್ನಗರದಲ್ಲೇ ಮತ್ತೊಂದು ಬಾಡಿಗೆ ಮನೆಯಲ್ಲಿ ವಾಸವಿದ್ದನು ಎಂದು ಎನ್ಐಎ ಮಾಹಿತಿ ನೀಡಿದೆ.