ದೇವಾಸ್ (ಮಧ್ಯಪ್ರದೇಶ): ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ಹೊರಟಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ. ದಂಪತಿ ತಮ್ಮ ಪುತ್ರಿಯೊಂದಿಗೆ ದೇವರ ದರ್ಶನಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಇದನ್ನೂ ಓದಿ: ರಾಮನಗರ: ಪ್ರೀತಿ ನಿರಾಕರಿಸಿದ್ದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ಎರಚಿದ್ದ ಮೆಕ್ಯಾನಿಕ್ ಬಂಧನ
ಇಲ್ಲಿನ ಖಟೆಗಾಂವ್ನ ನಿವಾಸಿ ರಾಜೇಶ್ ರಾಥೋಡ್, ಪತ್ನಿ ಸುನೀತಾ ಹಾಗೂ ಪುತ್ರಿ ವೈಶಾಲಿ ಎಂಬುವವರೇ ಮೃತರು ಎಂದು ಗುರುತಿಸಲಾಗಿದೆ. ಖಟೆಗಾಂವ್ - ನೇಮಾವರ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ದಂಪತಿ ಹಾಗೂ ಮಗಳು ಪ್ರಾಣ ಕಳೆದುಕೊಂಡಿದ್ದಾರೆ. ನೇಮಾವರದ ಪ್ರಸಿದ್ಧ ಶಿವನ ದೇವಾಲಯದಾದ ಸಿದ್ದೇಶ್ವರರ ದರ್ಶನಕ್ಕೆ ಈ ದಂಪತಿ ಹೊರಟಿದ್ದರು. ಈ ವೇಳೆ ರಾಮನಗರದ ಬಳಿ ಎದುರಿನಿಂದ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವಿಷಯ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ, ಮೂವರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ವೇಳೆ ಮೂವರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವೈದ್ಯರ ಪ್ರಕಾರ ಮಾಹಿತಿ, ರಾಜೇಶ್ ಮೊದಲು ಸಾವನ್ನಪ್ಪಿದರು. ಇದರ ಬಳಿಕ ಪತ್ನಿ ಸುನೀತಾ ಕೊನೆಯುಸಿರೆಳೆದರು. ಇದಾದ ಕೆಲವೇ ಕ್ಷಣಗಳಲ್ಲಿ ಮಗಳು ವೈಶಾಲಿ ಉಸಿರು ಕೂಡ ನಿಂತಿತು ಎಂದು ಗೊತ್ತಾಗಿದೆ. ಸದ್ಯ ಈ ಅಪಘಾತಕ್ಕೆ ಕಾರಣವಾದ ಕಾರಿನ ಸಂಖ್ಯೆಯನ್ನು ಎಂಪಿ12 - ಸಿಎ 9088 ಪತ್ತೆ ಹಚ್ಚಲಾಗಿದೆ. ಆದರೆ, ಆರೋಪಿ ಕಾರು ಚಾಲಕ ಪರಾರಿಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಬಸ್ ಪಲ್ಪಿ - ನಾಲ್ವರ ಸಾವು: ಮತ್ತೊಂದೆಡೆ, ಇದೇ ಮಧ್ಯಪ್ರದೇಶದಲ್ಲಿ ಮತ್ತೊಂದು ದುರ್ಘಟನೆ ಜರುಗಿದೆ. ಇಂದೋರ್‌ನಿಂದ ಛತ್ತರ್‌ಪುರಕ್ಕೆ ತೆರಳುತ್ತಿದ್ದ ಸ್ಲೀಪರ್ ಬಸ್ ಪಲ್ಟಿಯಾದ ಘಟನೆ ಸಂಭವಿಸಿದೆ. ಇದರ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಏಳು ಜನರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಗರ ಜಿಲ್ಲೆಯ ಛನ್‌ಬಿಲಾ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾರ್ ಕಣಿವೆಯಲ್ಲಿ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಇಲ್ಲಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ ಹೊಡೆದಿದೆ. ಈ ಬಸ್ನಲ್ಲಿ ಸುಮಾರು 35 ಜನರು ಪ್ರಯಾಣಿಸುತ್ತಿದ್ದರು. ರಸ್ತೆ ಬದಿ ಬಸ್ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆಗ ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಾಳುಗಳನ್ನು ಶಹಗಢ ಆರೋಗ್ಯ ಕೇಂದ್ರದಿಂದ ಹೆಚ್ಚಿನ ಚಿಕಿತ್ಸೆಗಾಗಿ ಸಾಗರ್ ಜಿಲ್ಲಾಸ್ಪತ್ರೆ ಮತ್ತು ಛತ್ತರ್‌ಪುರ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ, ಸ್ಥಳೀಯ ತಹಶೀಲ್ದಾರ್ ಎಲ್.ಪಿ. ಅಹಿರ್ವಾರ್ ಮತ್ತು ಬಂದಾ ತಹಶೀಲ್ದಾರ್ ಕುಲದೀಪ್ ಸಿಂಗ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮದುವೆ ಮುಗಿಸಿ ಬರುತ್ತಿದ್ದ ಪಿಕ್ ಅಪ್ ಪಲ್ಟಿ: ಇಬ್ಬರು ಸಾವು, 6 ಜನಕ್ಕೆ ಗಾಯ