ಶಿಯೋಪುರ (ಮಧ್ಯಪ್ರದೇಶ): ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾ ಮರಿಯೊಂದು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಕುನೋ ಅರಣ್ಯಾಧಿಕಾರಿಗಳ ಪ್ರಕಾರ, ಉದ್ಯಾನದಲ್ಲಿದ್ದ ಚೀತಾ ಮರಿಗಳ ಸಂಖ್ಯೆ ಈಗ ನಾಲ್ಕರಿಂದ ಮೂರಕ್ಕೆ ಇಳಿದಿದೆ. ಅರಣ್ಯ ಇಲಾಖೆಯ ತಂಡವು ಚೀತಾ ಮರಿಯ ಸಾವಿನ ಕಾರಣವನ್ನು ಪತ್ತೆ ಹಚ್ಚಲು ಮುಂದಾಗಿದೆ ಎಂದು ಅವರು ಹೇಳಿದರು.
ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತರಲಾದ ಜ್ವಾಲಾ ಎಂಬ ಹೆಣ್ಣು ಚೀತಾ ಈ ವರ್ಷದ ಮಾರ್ಚ್‌ನಲ್ಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ದುರಾದೃಷ್ಟವಶಾತ್ ಕಳೆದ ಕೆಲವು ತಿಂಗಳುಗಳಲ್ಲಿ, ಕುನೋ ರಾಷ್ಟ್ರೀಯ ಉದ್ಯಾನದ ಮೂರು ಚೀತಾಗಳು ಸಾವನ್ನಪ್ಪಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17, 2022 ರಂದು ತಮ್ಮ ಜನ್ಮದಿನದ ಸಂದರ್ಭದಲ್ಲಿ ನಮೀಬಿಯಾದಿಂದ ತಂದ ಎಂಟು ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡುಗಡೆ ಮಾಡಿದ್ದರು. 1952 ರಲ್ಲಿ ಚೀತಾಗಳು ಭಾರತದಲ್ಲಿ ಅಳಿದುಹೋಗಿವೆ ಎಂದು ಘೋಷಿಸಲಾಗಿತ್ತು. ಆದರೆ ಇತ್ತೀಚೆಗೆ ಎಂಟು ಚೀತಾಗಳನ್ನು (5 ಹೆಣ್ಣು ಮತ್ತು 3 ಗಂಡು) ಆಫ್ರಿಕಾದಿಂದ ತರಲಾಗಿತ್ತು.
ನಮೀಬಿಯಾದಿಂದ ಪ್ರಾಜೆಕ್ಟ್ ಚೀತಾದ ಭಾಗವಾಗಿ ಮತ್ತು ದೇಶದ ವನ್ಯಜೀವಿಗಳು ಮತ್ತು ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸುವ ಮತ್ತು ವೈವಿಧ್ಯಗೊಳಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಮೂಲಕ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳನ್ನು ತರಲಾಗಿತ್ತು ಮತ್ತು ಫೆಬ್ರವರಿ 18 ರಂದು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಪುನರ್ವಸತಿ ವ್ಯವಸ್ಥೆ ಮಾಡಲಾಗಿತ್ತು. ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಪ್ರಾಜೆಕ್ಟ್ ಚೀತಾದ ಅಡಿಯಲ್ಲಿ, ಪ್ರಕೃತಿ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಕ್ಕೂಟದ ಪ್ರಕಾರ ವಿಶೇಷವಾಗಿ ಚೀತಾಗಳ ಸಂತತಿಯನ್ನು ಭಾರತದಲ್ಲಿ ವೃದ್ಧಿಸಲು ಕ್ರಮಕೈಗೊಳ್ಳಲಾಗಿತ್ತು.
ಭಾರತವು ವನ್ಯಜೀವಿ ಸಂರಕ್ಷಣೆಯ ಸುದೀರ್ಘ ಇತಿಹಾಸವನ್ನು ಹೊಂದಿದೆ. ಅತ್ಯಂತ ಯಶಸ್ವಿ ವನ್ಯಜೀವಿ ಸಂರಕ್ಷಣಾ ಉದ್ಯಮಗಳಲ್ಲಿ ಒಂದಾದ 'ಪ್ರಾಜೆಕ್ಟ್ ಟೈಗರ್' 1972 ರಲ್ಲಿ ಪ್ರಾರಂಭವಾಯಿತು. ಇದು ಹುಲಿಗಳ ಸಂರಕ್ಷಣೆಗೆ ಮಾತ್ರವಲ್ಲದೇ ಇಡೀ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡಿದೆ.
ಚೀತಾಗಳ ಸ್ಥಳಾಂತರಕ್ಕೆ ಸಲಹೆ ನೀಡಿದ್ದ ಸುಪ್ರೀಂ ಕೋರ್ಟ್: ಮತ್ತೊಂದೆಡೆ ಕುನೋದಲ್ಲಿ ನಿರಂತರವಾಗಿ ಚೀತಾಗಳ ಸಾವಿನಿಂದಾಗಿ ರಾಜ್ಯ ಸರ್ಕಾರದ ವ್ಯವಸ್ಥೆ ಮೇಲೆ ಪ್ರಶ್ನೆಗಳು ಎದ್ದಿದ್ದವು. ಚೀತಾಗಳ ನಿರಂತರ ಸಾವಿನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಚೀತಾಗಳನ್ನು ರಾಜಸ್ಥಾನಕ್ಕೆ ಸ್ಥಳಾಂತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿತ್ತು. ರಾಜಕೀಯವನ್ನು ಮೀರಿ ಚೀತಾಗಳನ್ನು ರಾಜಸ್ಥಾನಕ್ಕೆ ಸ್ಥಳಾಂತರಿಸುವ ಬಗ್ಗೆ ಯೋಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಿಳಿಸಿತ್ತು.
ಆದರೆ, ಸುಪ್ರೀಂಕೋರ್ಟ್‌ನ ಹೇಳಿಕೆಗೆ ಮೌನ ವಹಿಸಿರುವ ಕೇಂದ್ರ ಅರಣ್ಯ ಸಚಿವ ವಿಜಯ್ ಶಾ, ಚೀತಾಗಳು ಕುನೋದಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಹೇಳಿದ್ದರು. ರಾಜಸ್ಥಾನದ ಬದಲಿಗೆ ಕುನೋ ಜೊತೆಗೆ ನೌರದೇಹಿ, ಇಂದಿರಾ ಸಾಗರದ ಅರಣ್ಯಗಳಿಗೆ ಚೀತಾಗಳನ್ನು ಸ್ಥಳಾಂತರಿಸುವ ಬಗ್ಗೆ ಅರಣ್ಯ ಸಚಿವರು ಮಾತನಾಡಿದ್ದರು. ಈಗ ಚೀತಾ ಮರಿಯ ಸಾವಿನಿಂದ ಮತ್ತೆ ಈ ವಿಷಯ ದೇಶಾದ್ಯಂತ ಚರ್ಚೆಯಾಗುತ್ತಿದೆ.