ಶ್ರೀನಗರ(ಜಮ್ಮು ಕಾಶ್ಮೀರ): ಭದ್ರತಾ ಪಡೆಗಳು ಮತ್ತು ಜಮ್ಮು ಕಾಶ್ಮೀರದ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೋಯ್ಬಾದ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಲಷ್ಕರ್-ಎ-ತೋಯ್ಬಾದ ಕಮಾಂಡರ್ ಗುಲ್ಜಾರ್ ಅಹ್ಮದ್ ರೇಶಿ ಕೂಡಾ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ನಿಖರ ಮಾಹಿತಿ ಆಧರಿಸಿ ಆಶ್ಮುಜಿ ಮತ್ತು ದೇವ್ಸರ್ ಮಾರ್ಗದಲ್ಲಿ ಸಂಜೆ 7.40ಕ್ಕೆ ಕಾರ್ಯಾಚರಣೆ ನಡೆಸಲಾಗಿದೆ.
ಮೊದಲಿಗೆ ಶರಣಾಗಲು ಭಯೋತ್ಪಾದಕರಿಗೆ ಮನವಿ ಮಾಡಲಾಯಿತು. ಆದರೂ ಅವರು ಗುಂಡಿನ ದಾಳಿ ನಡೆಸಿದಾಗ ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳು ಉಗ್ರರನ್ನು ಗುಂಡಿಕ್ಕಿ ಕೊಂದಿವೆ.
ಪ್ರಕರಣದ ನಂತರ ಎಕೆ 47 ಸೇರಿದಂತೆ ಹಲವು ಶಸ್ತ್ರಗಳನ್ನು ಭದ್ರತಾ ಪಡೆಗಳು ವಶಕ್ಕೆ ತೆಗೆದುಕೊಂಡಿವೆ. ಗುಲ್ಜಾರ್ ಅಹ್ಮದ್ ರೇಶಿ ಜೊತೆಗೆ ಇಮ್ರಾನ್ ದಾರ್ ಎಂಬ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ. ಈ ಇಬ್ಬರೂ ಭಯೋತ್ಪಾದಕರು ಜಮ್ಮು ಕಾಶ್ಮೀರದಲ್ಲಿದ್ದ ಬಿಹಾರ ಮೂಲದ ಇಬ್ಬರನ್ನು ಕೊಂದಿದ್ದರು. ಅಕ್ಟೋಬರ್ 17ರಂದು ಈ ಘಟನೆ ನಡೆದಿತ್ತು.
ಇದನ್ನೂ ಓದಿ: VIDEO.. ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್, ಪ್ರಕರಣ ದಾಖಲು