ನವದೆಹಲಿ/ಬೆಂಗಳೂರು: ಕೇಂದ್ರ ಸರ್ಕಾರ ಇಂದು 2022-23ನೇ ಸಾಲಿನ ಬಜೆಟ್ ಮಂಡಿಸುತ್ತಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ್ದು, 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.
2014ರಿಂದ ಜನರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯವಾಗಿದೆ. ಹೀಗಾಗಿ, ನಾಗರಿಕರನ್ನು ಸಶಕ್ತಗೊಳಿಸಲು ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. 'ನಾರಿ ಶಕ್ತಿ'ಯ ಪ್ರಾಮುಖ್ಯತೆಯನ್ನು ಗುರುತಿಸಿ, ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ 3 ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಮಿಷನ್ ಪೋಷಣ್ 2.0, ಮಿಷನ್ ವಾತ್ಸಲ್ಯ ಮತ್ತು ಮಿಷನ್ ಶಕ್ತಿಗಳ ಮೂಲಕ ಸಮಗ್ರ ಪ್ರಯೋಜನಗಳನ್ನು ಒದಗಿಸಲಾಗುವುದು ಎಂದರು.
ಮಕ್ಕಳಿಗಾಗಿ ಸಕ್ಷಮ್ ಅಂಗನವಾಡಿ ಎಂಬ ಹೊಸ ಯೋಜನೆ ರೂಪಿಸಲಾಗಿದ್ದು, 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಜೊತೆಗೆ ಅಂಗನವಾಡಿಗಳಿಗೆ ಆಡಿಯೋ ಮತ್ತು ವಿಡಿಯೋ ವ್ಯವಸ್ಥೆ ಸೌಲಭ್ಯ ಒದಗಿಸಲಾಗುವುದು. ಇದು ಮಕ್ಕಳ ಬೆಳವಣಿಗೆಗಳಿಗೆ ಉತ್ತಮ ಪರಿಸರ ಒದಗಿಸುತ್ತದೆ ಎಂದು ಸೀತಾರಾಮನ್ ಇದೇ ವೇಳೆ ಘೋಷಣೆ ಮಾಡಿದರು.
3.8 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. 2020-23ರಲ್ಲಿ 80 ಲಕ್ಷ ಮನೆ ನಿರ್ಮಾಣ ಪೂರ್ಣ ಮಾಡಲಾಗುತ್ತದೆ. ಪಿಎಂ ಆವಾಸ್ ಯೋಜನೆಗೆ 48 ಸಾವಿರ ಕೋಟಿ ರೂ. ನೀಡಲಾಗಿದೆ. ಎಸ್ ಸಿ, ಎಸ್ ಟಿ ಮತ್ತು ರೈತರಿಗೆ ಆರ್ಥಿಕ ನೆರವು ನೀಡಲಾಗಿದೆ. ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ ಜಾರಿಗೊಳಿಸಲಾಗುವುದು.
ಕಳೆದ ವರ್ಷ ಸೀತಾರಾಮನ್ ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0 ಯೋಜನೆಗೆ ₹ 20,105 ಕೋಟಿ, ಮಿಷನ್ ವಾತ್ಸಲ್ಯಕ್ಕೆ 900 ಕೋಟಿ ರೂ. ಮತ್ತು ಮಿಷನ್ ಶಕ್ತಿ (ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಮಿಷನ್) 3,109 ಕೋಟಿ ರೂ. ಮೀಸಲಿಟ್ಟಿದ್ದರು.