ದರ್ರಾಂಗ್/ಅಸ್ಸೋಂ: ಅಸ್ಸೋಂನ ದರ್ರಾಂಗ್ ಜಿಲ್ಲೆಯಲ್ಲಿ ಅಕ್ರಮ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಹಾಗೂ ಹತ್ತು ಮಂದಿ ಪೊಲೀಸರು ಗಾಯಗೊಂಡರು.
ಸುಮಾರು ಎರಡು ದಶಕಗಳಿಂದ ದರ್ರಾಂಗ್ ಜಿಲ್ಲೆಯ ಧಲ್ಪುರ ಪ್ರದೇಶದ ಸುಮಾರು 77420 ಎಕರೆಯಷ್ಟು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ತೆರವು ಕಾರ್ಯಾಚರಣೆಗೆಂದು ಸ್ಥಳಕ್ಕೆ ಆಗಮಿಸಿದ ವೇಳೆ ಸ್ಥಳದಲ್ಲಿ ಜಮಾಯಿಸಿದ ನೂರಾರು ಸ್ಥಳೀಯರು ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿ ಅಡಚಣೆ ಉಂಟುಮಾಡಿದರು. ಈ ಸಂದರ್ಭದಲ್ಲಿ ಅಸ್ಸೋಂ ಸರ್ಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಹಿಂದೆ ಅತಿಕ್ರಮಣದಾರರಿಗೆ ಒತ್ತುವರಿ ತೆರವು ಸೂಚನೆ ನೀಡಿದ್ದ ಜಿಲ್ಲಾಡಳಿತ, ಸ್ಥಳವನ್ನು ಖಾಲಿ ಮಾಡುವಂತೆ ಸ್ಥಳೀಯರಿಗೆ ಸೂಚಿಸಿತ್ತು. ಆದಾಗ್ಯೂ, ಕೆಲವು ಸ್ಥಳೀಯರು ತೆರವು ಕಾರ್ಯಾಚರಣೆ ತಂಡದ ಮೇಲೆ ಕಲ್ಲು ತೂರಿದರು. ಈ ವೇಳೆ ಭದ್ರತಾ ಪಡೆಗಳು ಮೊದಲು ಅಶ್ರುವಾಯು ಸಿಡಿಸಿ ನಂತರ ಜನರನ್ನು ಚದುರಿಸಲು ಖಾಲಿ ಜಾಗದಲ್ಲಿ ಗುಂಡು ಹಾರಿಸಿದರು. ಈ ವೇಳೆ ಹಿಂಸಾಚಾರ ಭುಗಿಲೆದ್ದು ಪೊಲೀಸರು ಪ್ರತಿಭಟನೆ ಮಾಡುತ್ತಿದ್ದ ಸ್ಥಳೀಯರ ಮೇಲೆ ಗುಂಡು ಹಾರಿಸಿದರು. ಘಟನೆಯಲ್ಲಿ ಇಬ್ಬರು ನಾಗರಿಕರಿಗೆ ಗುಂಡು ತಗುಲಿ ಸಾವನ್ನಪ್ಪಿದರು.
ಆಗ ಕೆಲವು ಸ್ಥಳೀಯರು ದೊಣ್ಣೆ ಹಾಗೂ ಮಾರಕಾಸ್ತ್ರ ಹಿಡಿದು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದರು. ಈ ವೇಳೆ 10 ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕೆಲವು ಭದ್ರತಾ ಸಿಬ್ಬಂದಿಯನ್ನು ಚಿಕಿತ್ಸೆಗಾಗಿ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2021ರ ಸೆಪ್ಟೆಂಬರ್ 20 ರಂದು ಸರ್ಕಾರವು ಧಲ್‌ಪುರ್ ಪ್ರದೇಶದಲ್ಲಿ ಮತ್ತೊಂದು ಬೃಹತ್ ತೆರವು ಕಾರ್ಯಾಚರಣೆಯನ್ನು ನಡೆಸಿ ಸುಮಾರು 750 ಕುಟುಂಬಗಳನ್ನು ಅಕ್ರಮ ಒತ್ತುವರಿ ಸ್ಥಳದಿಂದ ಎತ್ತಂಗಡಿ ಮಾಡಿಸಿದೆ.