ಚೆನ್ನೈ(ತಮಿಳುನಾಡು): ಕೊರೊನಾ ಎರಡನೇ ಅಲೆ ವೇಳೆ ಸೋಂಕಿಗೆ ತುತ್ತಾಗಿ ಹೋಟೆಲ್ವೊಂದರಲ್ಲಿ ಕ್ವಾರಂಟೈನ್ ಆಗಿದ್ದ ಇಬ್ಬರು ವೈದ್ಯೆಯರ ಮೇಲೆ ಅತ್ಯಾಚಾರವೆಸಗಿ(Rape on female doctors), ಕಿರುಕುಳ ನೀಡಿದ ಆರೋಪದಡಿ ಚೆನ್ನೈನ ಸರ್ಕಾರಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು(Doctors arrested in rape case) ಗುರುವಾರ ಬಂಧಿಸಲಾಗಿದೆ.
ಎಸ್.ವೆಟ್ರಿಸೆಲ್ವನ್(35) ಮತ್ತು ಎನ್. ಮೋಹನ್ರಾಜ್(28) ಬಂಧಿತ ವೈದ್ಯರು. ಈ ಇಬ್ಬರೂ ಆರೋಪಿಗಳು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ(Rajiv gandhi government hospital) ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಆಗಸ್ಟ್‌ನಲ್ಲಿ ತಮ್ಮ ಮಹಿಳಾ ಸಹೋದ್ಯೋಗಿಗಳೊಂದಿಗೆ ಕೋವಿಡ್ -19 ಕರ್ತವ್ಯದ ಮಧ್ಯೆ ಐಸೋಲೇಶನ್ ಪ್ರೋಟೋಕಾಲ್‌ಗಳ ಭಾಗವಾಗಿ ಟಿ.ನಗರದ ಆಸ್ಪತ್ರೆಯಲ್ಲಿ ತಂಗಿದ್ದರು. ಈ ವೇಳೆ ಡಾ. ವೆಟ್ರಿ ಸೆಲ್ವನ್ ಮಹಿಳಾ ವೈದ್ಯೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಅದೇ ರೀತಿ ಇನ್ನೋರ್ವ ವೈದ್ಯ ಮೋಹನರಾಜ್ ಸಹ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಹಿನ್ನೆಲೆ ಆ ಇಬ್ಬರು ಮಹಿಳಾ ವೈದ್ಯರು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ಮುಖ್ಯಸ್ಥೆ ಥೇರಣಿ ರಾಜನ್ ಅವರಿಗೆ ಈ ವಿಚಾರ ತಿಳಿಸಿದ್ದಾರೆ. ಥೇರನಿರಾಜನ್ ಅವರು ತಕ್ಷಣವೇ ಟಿ.ನಗರ ಜಿಲ್ಲಾಧಿಕಾರಿ ಹರಿಕಿರಣ್ ಪ್ರಸಾದ್ ಅವರಿಗೆ ಈ ಸಂಬಂಧ ದೂರು ಸಲ್ಲಿಸಿದ್ದಾರೆ.
ದೂರಿನ ಆಧಾರದ ಮೇಲೆ ತೇನಾಂಪೇಟೆ ಮಹಿಳಾ ಠಾಣೆ ಪೊಲೀಸರು ತನಿಖೆ ನಡೆಸಿ ಇಬ್ಬರೂ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ವೈದ್ಯಕೀಯ ನಿರ್ದೇಶನಾಲಯ ಕೂಡ ಇಬ್ಬರು ವೈದ್ಯರನ್ನು ವಜಾಗೊಳಿಸಿದ್ದು, ಗುರುವಾರ (ನ.18) ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಸದ್ಯ ವಿಶಾಕಾ ಸಮಿತಿ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಈ ಇಬ್ಬರು ಆರೋಪಿಗಳು ಇತರೆ ಮಹಿಳಾ ಸಹೋದ್ಯೋಗಿಗಳಿಗೇನಾದರೂ ಲೈಂಗಿಕ ಕಿರುಕುಳ ನೀಡಿದ್ದಾರೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಸಮಿತಿಯು ಬಂಧಿತ ವೈದ್ಯರ ಸೆಲ್ ಫೋನ್‌ಗಳನ್ನು ಸೈಬರ್ ಪ್ರಯೋಗಾಲಯಕ್ಕೆ ಕಳುಹಿಸಿದೆ.