ದುರ್ಗಾಪುರ (ಪಶ್ಚಿಮ ಬಂಗಾಳ): ಖಾಸಗಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟು ಸುಮಾರು 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಕಾರ್ಮಿಕರನ್ನು ಮಹಮ್ಮದ್ ಅಜೀಜ್ (40) ಮತ್ತು ರಮೇಶ್ ಕುಮಾರ್ (38) ಎಂದು ಗುರುತಿಸಲಾಗಿದೆ.
ಇಲ್ಲಿನ ಬೋರ್ಜೋರಾದ ಘುತ್‌ಘುಟಿಯಾದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಕಾದ ಕಬ್ಬಿಣದ ದ್ರವ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಇದರಿಂದ 15 ಕಾರ್ಮಿಕರು ಸುಟ್ಟಗಾಯಗಳಿಂದ ಬಳಳುತ್ತಿದ್ದರು. ಇವರಲ್ಲಿ ತೀವ್ರವಾಗಿ ಗಾಯಗೊಂಡ 14 ಕಾರ್ಮಿಕರನ್ನು ದುರ್ಗಾಪುರದ ಬಿಧಾನ್ ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.
ಅಲ್ಲದೇ, ಗಂಭೀರ ಸ್ಥಿತಿಯಲ್ಲಿದ್ದ ಎಂಟು ಮಂದಿಯನ್ನು ದುರ್ಗಾಪುರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇದರಲ್ಲಿ ಐವರನ್ನು ಐಸಿಯುನಲ್ಲಿ ದಾಖಲಾಗಿತ್ತು. ಈ ಪೈಕಿ ಮಂಗಳವಾರ ತಡರಾತ್ರಿ ಕಾರ್ಮಿಕರಾದ ಮಹಮ್ಮದ್ ಅಜೀಜ್ ಮತ್ತು ರಮೇಶ್ ಕುಮಾರ್ ಮೃತಪಟ್ಟಿದ್ದಾರೆ. ಇವರಿಬ್ಬರೂ ಬಿಹಾರದ ಮುಜಾಫರ್‌ಪುರ ಮತ್ತು ಸಮಸ್ತಿಪುರ ಮೂಲದವರಾಗಿದ್ದಾರೆ. ಉಳಿದ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಬಗ್ಗೆ ದುರ್ಗಾಪುರ ಖಾಸಗಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ದುರ್ಗದಾಸ್ ರಾಯ್ ಮಾತನಾಡಿ, ಹದಿನಾಲ್ಕು ಕಾರ್ಮಿಕರನ್ನು ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ಕರೆತರಲಾಗಿತ್ತು. ಈ ಪೈಕಿ ಎಂಟು ಮಂದಿ ಸ್ಥಿತಿ ಚಿಂತಾಜನಕವಾಗಿತ್ತು. ಇಬ್ಬರು ಮೃತಪಟ್ಟಿದ್ದಾರೆ. ಉಳಿದವರ ನಮ್ಮ ವೈದ್ಯಕೀಯ ತಂಡ ನಿಗಾ ವಹಿಸುತ್ತಿದೆ ಎಂದು ತಿಳಿಸಿದ್ದಾರೆ.
ಕಾರ್ಖಾನೆಯ ಮೂಲಗಳು ಪ್ರಕಾರ, ಬಾಯ್ಲರ್‌ನಲ್ಲಿ ಹಠಾತ್ ಸ್ಫೋಟ ಸಂಭವಿಸಿ ಈ ದುರಂತ ಉಂಟಾಗಿದೆ. ಘಟನೆ ಸಂಭವಿಸಿದಾಗ ಕಾರ್ಮಿಕರು ಬಾಯ್ಲರ್ ಮತ್ತು ಲ್ಯಾಡಲ್ ಹತ್ತಿರ ಕೆಲಸ ಮಾಡುತ್ತಿದ್ದರು. ಎಲ್ಲವೂ ಇದ್ದಕ್ಕಿದ್ದಂತೆ ಸಂಭವಿಸಿದ ಕಾರಣ ಕರಗಿದ ಕಬ್ಬಿಣದಿಂದ ತಪ್ಪಿಸಿಕೊಳ್ಳಲು ಕಾರ್ಮಿಕರಿಗೆ ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪಟಾಕಿ ಗೋದಾಮಿನಲ್ಲಿ ಭೀಕರ ಸ್ಫೋಟ: 9 ಮಂದಿ ದುರ್ಮರಣ, ಪರಿಹಾರ ಘೋಷಿಸಿದ ಸಿಎಂ
ಲೂಧಿಯಾನದ ಘಟನೆ: ಇತ್ತೀಚೆಗೆ ಪಂಜಾಬ್ನ ಲೂಧಿಯಾನ ಜಿಲ್ಲೆಯಲ್ಲಿ ಕಾರ್ಖಾನೆಯೊಂದರಲ್ಲಿ ಅನಿಲ ಸೋರಿಕೆಯಾಗಿ ಭಾರಿ ದುರಂತ ಸಂಭವಿಸಿತ್ತು. ನಾಲ್ವರು ಪುರುಷರು ಹಾಗೂ ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ದುರ್ಮರಣ ಹೊಂದಿದ್ದರು. ಅಲ್ಲದೇ, ಅಂದಾಜು ಹತ್ತಕ್ಕೂ ಹೆಚ್ಚು ಜನರು ಪ್ರಜ್ಞೆ ಕಳೆದುಕೊಂಡು ಬಿದ್ದು ಆಸ್ಪತ್ರೆಗೆ ಸೇರಿದ್ದರು.
ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಿಂದಾಗಿ ಸಮೀಪದ ಅಕ್ಕ-ಪಕ್ಕದ ಮನೆಗಳಲ್ಲಿ ನೆಲೆಸಿದ್ದ ಜನರು ಕೂಡ ತೊಂದರೆಗೆ ಒಳಗಾಗಿದ್ದರು. ಈ ಗ್ಯಾಸ್ ಸೋರಿಕೆಯಿಂದಾಗಿ 300 ಮೀಟರ್ ವ್ಯಾಪ್ತಿಯ ಜನರು ಉಸಿರಾಡಲು ತೊಂದರೆ ಅನುಭವಿಸಿದ್ದರು. ಮೂರ್ಛೆ ತಪ್ಪಿದ ಬಿದ್ದ ಜನರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಜೊತೆಗೆ ಎನ್ಡಿಆರ್ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿ ಸ್ಥಳೀಯ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಅನಿಲ ಸೋರಿಕೆಗೆ ನಿಖರ ಪತ್ತೆ ಹಚ್ಚಲು ಪೊಲೀಸರಿಗೆ ಆದೇಶಿಸಲಾಗಿತ್ತು.
ಇದನ್ನೂ ಓದಿ: ಲೂಧಿಯಾನದಲ್ಲಿ ಅನಿಲ ಸೋರಿಕೆ: ಇಬ್ಬರು ಮಕ್ಕಳು ಸೇರಿದಂತೆ 11 ಮಂದಿ ಸಾವು