ಕೊಯಮತ್ತೂರು( ತಮಿಳುನಾಡು): ಇಲ್ಲಿನ ಕಾರ್ಪೊರೇಷನ್ ಶೌಚಾಲಯ ಒಂದರಲ್ಲಿ ಒಂದೇ ಕೊಠಡಿಯಲ್ಲಿ ಎರಡು ಕಮೋಡ್ಗಳನ್ನು ಅಳವಡಿಸಲಾಗಿದೆ. ಇದು ಸಾರ್ವಜನಿಕರು ಒಂದು ಕ್ಷಣ ದಂಗಾಗುವಂತೆ ಮಾಡಿದೆ. ಈ ವಿಚಾರ ಈಗ ರಾಜ್ಯಾದ್ಯಂತ ಸದ್ದು ಕೂಡಾ ಮಾಡುತ್ತಿದೆ.
ಕೊಯಮತ್ತೂರಿನ ಅಮ್ಮನ್ ಕುಲಂ ಪ್ರದೇಶದಲ್ಲಿ ಕೊಯಮತ್ತೂರು ಕಾರ್ಪೊರೇಷನ್ ನಿರ್ಮಿಸಿರುವ ಶೌಚಾಲಯದಲ್ಲಿ ಇಂತಹ ಅಚ್ಚರಿಯ ಯಡವಟ್ಟು ನಡೆದಿದೆ. ಒಂದೇ ಕೊಠಡಿಯಲ್ಲಿ ಎರಡು ಶೌಚದ ಕಮೋಡ್ಗಳನ್ನು ಅಳವಡಿಸಲಾಗಿದೆ. ಇದನ್ನು ಕಂಡ ಅಲ್ಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಈ ಹಿಂದೆ ಬಾಗಿಲು ಕೂಡ ಇಲ್ಲದ ಶೌಚಾಲಯವನ್ನು ಸಾರ್ವಜನಿಕರು ಬಳಸಿದ್ದೂ ಇದೆ. ಆದರೆ ಈಗ ಅದನ್ನು ನವೀಕರಿಸುವ ಕೆಲಸ ನಡೆಯುತ್ತಿದೆ.
ಈ ಎಲ್ಲ ಸಮಸ್ಯೆಗಳ ನಡುವೆ ಶೌಚಾಲಯದ ಕೊಠಡಿಯೊಂದರಲ್ಲಿ ಎರಡು ಕಮೋಡ್ಗಳನ್ನು ಒಟ್ಟಿಗೆ ಹಾಕಲಾಗಿದೆ. ಅಷ್ಟೇ ಅಲ್ಲ ಅದಕ್ಕೆ ಬಾಗಿಲನ್ನು ಸಹ ಅಳವಡಿಸಿಲ್ಲ. ಇದು ಅಲ್ಲಿನ ಸಾರ್ವಜನಿಕರನ್ನು ರೊಚ್ಚಿಗೆಬ್ಬಿಸಿದೆ. ಬಾಗಿಲೂ ಇಲ್ಲ ಹಾಗೂ ಒಂದೇ ಕೊಠಡಿಯಲ್ಲಿ ಎರಡು ಕಮೋಡ್ ಅಳವಡಿಸಲಾಗಿದೆ. ಹೀಗಾದರೆ ಜನ ಶೌಚಾಲಯವನ್ನು ಬಳಸುವುದಾದರೂ ಹೇಗೆ ಎಂದು ಕೊಯಮತ್ತೂರು ಪಾಲಿಕೆ ಆಡಳಿತವನ್ನು ಪ್ರಶ್ನಿಸಿದ್ದಾರೆ.
ಪಾಲಿಕೆಯ ಇಂತಹ ಕಾಮಗಾರಿಯಿಂದ ಸಿಟ್ಟಾಗಿರುವ ಸಾರ್ವಜನಿಕರು, ಪಾಲಿಕೆ ವ್ಯಾಪ್ತಿಯ ಇತರ ಭಾಗಗಳಲ್ಲೂ ಇದೇ ತರಹದ ಶೌಚಾಲಯ ನಿರ್ಮಾಣ ಮಾಡಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇನ್ನಾದರೂ ಪಾಲಿಕೆ ಆಯುಕ್ತರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ನಡುವೆ ಶೌಚಾಲಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿಏ ಹರಿದಾಡುತ್ತಿದೆ. ಪಾಲಿಕೆ ಅಧಿಕಾರಿಗಳಿಂದ ಮಾತ್ರ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದನ್ನು ಓದಿ:₹25 ಲಕ್ಷಕ್ಕೆ 2 ಹುಲಿ ಮರಿಗಳು ಮಾರಾಟಕ್ಕಿವೆ.. ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದವ ಅಂದರ್