ಹೌರಾ: ಇಲ್ಲಿ ನಡೆದ ದಾರುಣ ಘಟನೆಯೊಂದರಲ್ಲಿ ಇಬ್ಬರು ಪುಟ್ಟ ಮಕ್ಕಳು ಲೋಕಲ್ ಟ್ರೈನ್ ಅಡಿಗೆ ಸಿಲುಕಿ ಮೃತಪಟ್ಟಿವೆ. ಮತ್ತೊಂದು ಮಗು ತೀವ್ರವಾಗಿ ಗಾಯಗೊಂಡಿದ್ದು, ಈ ಘಟನೆಗೆ ಕಾರಣವೇನೆಂಬುದು ಗೊತ್ತಾಗಿಲ್ಲ. ಉಲುಬೇರಿಯಾ ರೈಲ್ವೆ ನಿಲ್ದಾಣಕ್ಕೆ ಅತಿ ಹತ್ತಿರದ ದೋಮ್ ಪಾರಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.
ಮೂಲಗಳ ಪ್ರಕಾರ, ಊರಿಂದಾಚೆ ಇರುವ ರೈಲ್ವೆ ಹಳಿಗಳ ಮೇಲೆ ಮಕ್ಕಳು ಆಟವಾಡುತ್ತಿದ್ದರು. ಆಗ ಹಠಾತ್ತಾಗಿ ರೈಲು ಆಗಮಿಸಿದ್ದರಿಂದ ಇಬ್ಬರು ಮಕ್ಕಳು ರೈಲಿನಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮತ್ತೊಂದು ಮಗುವಿಗೆ ಗಾಯವಾಗಿದೆ. ಅಪಘಾತಕ್ಕೀಡಾದ ಮೂರೂ ಮಕ್ಕಳು 10 ರಿಂದ 12 ರ ವಯೋಮಾನದವರು ಎನ್ನಲಾಗಿದೆ.
ಉಲುಬೇರಿಯಾ ಪೊಲೀಸ್ ಸ್ಟೇಷನ್ ಮತ್ತು ರೈಲ್ವೆ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿದ್ದಾರೆ. ಆಗ್ನೇಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿತ್ಯ ಕುಮಾರ್ ಚೌಧರಿ ಮಾತನಾಡಿ, ಉಲುಬೇರಿಯಾ ನಿಲ್ದಾಣದ ಬಳಿ ನಡೆದ ಘಟನೆ ತುಂಬಾ ದುಃಖಕರವಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.