ದುಬ್ರಿ (ಅಸ್ಸಾಂ) : ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ದುಬ್ರಿ ಜಿಲ್ಲೆಯ ಬಿಲಸಿಪಾರದಲ್ಲಿ ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ ಜರುಗಿದೆ. ಹಜಾರಿಪಾರಾದ ಸಮೀಪದ ಬೆಳ್ತಾಳಿ ಹಾಗೂ ಫಕಿರಾಗ್ರಾಮ್ ರಸ್ತೆಯಲ್ಲಿ ಎರಡು ಬೈಕ್ಗಳು ಡಿಕ್ಕಿಯಾಗಿವೆ.
ಒಂದು ಬೈಕ್ ಬಿಲಸಿಪಾರ ಕಡೆಯಿಂದ ಫಕಿರಗ್ರಾಮ್ ಕಡೆಗೆ ವೇಗವಾಗಿ ಸಂಚರಿಸುತ್ತಿತ್ತು. ಇನ್ನೊಂದು ಬೈಕ್ (ಕೋಕ್ರಾಜಾರ್ನಿಂದ ಹಜಾರಿಪಾರಾ) ಬಿಲಸಿಪಾರದ ಕಡೆಗೆ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬರುತ್ತಿತ್ತು. ವೇಗವಾಗಿ ಬಂದ ಎರಡೂ ಬೈಕ್ಗಳು ಹಜಾರಿಪಾರಾದ ಬಿಲಸಿಪಾರದಲ್ಲಿ ಮುಖಾಮುಖಿಯಾಗಿ ಡಿಕ್ಕಿಗೊಳಗಾಗಿವೆ. ಪರಿಣಾಮ, ನಾಲ್ವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಮೃತರನ್ನು ಜಹೀರ್ ಖಾ, ನೂರ್ಭಕ್ತಾ ಖಾ, ನೂರಮ್ಮಹಮ್ಮದ್ ಹುಸೇನ್ ಮತ್ತು ಅಬು ಸಿದ್ದಿಕಿ ಎಂದು ಗುರುತಿಸಲಾಗಿದೆ. ಜಹೀರ್ ಖಾ, ನೂರ್ಭಕ್ತಾ ಖಾ ಅವರು ಬಿಲಸ್ಪರದ ಮಸ್ಪರ ನಿವಾಸಿಗಳೆಂದು ತಿಳಿದುಬಂದಿದೆ. ಅದೇ ರೀತಿ ನೂರಮ್ಮಹಮ್ಮದ್ ಹುಸೇನ್ ಮತ್ತು ಅಬು ಸಿದ್ದಿಕಿ ಫಕಿರಾಗ್ರಾಮ್ನ ಪಕಿರ್ತಲಾದವರು ಎಂಬ ಮಾಹಿತಿ ಸಿಕ್ಕಿದೆ.
ಅವಘಡ ನಡೆದ ಸ್ಥಳ ಪರಿಶೀಲಿಸಿದಾಗ ಒಂದು ಬೈಕ್ನ ನಂಬರ್ ಪ್ಲೇಟ್ AS 19T 4750 ಎಂಬುದು ತಿಳಿದುಬಂದಿದೆ. ಇನ್ನೊಂದು ಬೈಕ್ನಲ್ಲಿ ನಂಬರ್ ಪ್ಲೇಟ್ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಅವಘಡ ನಡೆದ ನಂತರ ಘಟನಾ ಸ್ಥಳಕ್ಕೆ ಬಿಲಸಿಪಾರ, ರಣಿಗಂಜ್ ಮತ್ತು ಲಕಿಗಂಜ್ ಪೊಲೀಸರು ತಲುಪಿದ್ದಾರೆ. ನಂತರ ಮೃತದೇಹಗಳನ್ನು ಬಿಲಸಿಪಾರ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ.
ಅಪಘಾತದಲ್ಲಿ ಅಪ್ಪ, ಮಗಳು ಸಾವು: ಬೈಕ್ ಹಾಗೂ ಗೂಡ್ಸ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ತಂದೆ ಹಾಗೂ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿ ತಾಯಿ, ಮಗ ಗಂಭೀರವಾಗಿ ಗಾಯಗೊಂಡ ಘಟನೆ ಇತ್ತೀಚೆಗೆ ಕಲಬುರಗಿಯ ಹೊರವಲಯದ ಜೇವರ್ಗಿ ಹೆದ್ದಾರಿಯಲ್ಲಿ ನಡೆದಿತ್ತು.
ಇದನ್ನೂ ಓದಿ: ಹುಬ್ಬಳ್ಳಿ: ಪಾದಚಾರಿಗೆ ಗುದ್ದಿದ ಬೈಕ್ ಸವಾರ.. ಇಬ್ಬರೂ ಸ್ಥಳದಲ್ಲೇ ಸಾವು