ಚೆನ್ನೈ (ತಮಿಳುನಾಡು): ಕಾಲಿವುಡ್ ನಟ ಆರ್ಯ ಹೆಸರಿನಲ್ಲಿ ಶ್ರೀಲಂಕಾ ಮೂಲದ ಮಹಿಳೆಗೆ 70 ಲಕ್ಷ ರೂಪಾಯಿ ವಂಚನೆ ಮಾಡಿದ್ದ ಇಬ್ಬರನ್ನು ಚೆನ್ನೈ ಸೆಂಟ್ರಲ್ ಕ್ರೈಂ ಬ್ರಾಂಚ್ನ ಸೈಬರ್ ಕ್ರೈಂ ವಿಂಗ್ ಅಧಿಕಾರಿಗಳು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳನ್ನು ಮಹಮ್ಮದ್ ಅರ್ಮಾನ್ ಮತ್ತು ಆತನ ಸೋದರ ಮೊಹಮ್ಮದ್ ಹುಸೇನಿ ಎಂದು ಗುರುತಿಸಲಾಗಿದೆ. ಇಬ್ಬರಿಂದಲೂ ಎರಡು ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್, ಐಪ್ಯಾಡ್ ಮತ್ತು ಮಹತ್ವದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಂತರ ಅವರನ್ನು ಎಗ್ಮೋರ್ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜರ್ಮನಿಯಲ್ಲಿ ವಾಸಿಸುತ್ತಿರುವ ಶ್ರೀಲಂಕಾದ ಯುವತಿ ವಿಡ್ಜಾ ಕಳೆದ ಫೆಬ್ರವರಿಯಲ್ಲಿ ನಟ ಆರ್ಯ ವಿರುದ್ಧ ರಾಷ್ಟ್ರಪತಿ ಕಚೇರಿ ಮತ್ತು ಪ್ರಧಾನಿ ಕಚೇರಿಗೆ ಆನ್‌ಲೈನ್ ಮೂಲಕ ದೂರು ನೀಡಿದ್ದರು. ಈ ವೇಳೆ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ದೂರಿನಲ್ಲಿ, ಆರ್ಯ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದು, ಮದುವೆಯ ಭರವಸೆಯ ನೀಡಿ ₹70,40,000 ಪಡೆದು ಮೋಸ ಮಾಡಿರುವುದಾಗಿ ಮಹಿಳೆ ಹೇಳಿದ್ದರು.
ಆಗಸ್ಟ್ 10ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ಆರ್ಯ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ಪ್ರಕರಣದಲ್ಲಿ ಆರ್ಯ ಭಾಗಿಯಾಗಿರುವುದನ್ನು ದೃಢಪಡಿಸಲು ಯಾವುದೇ ಪುರಾವೆಗಳು ಸಿಗಲಿಲ್ಲ. ಬ್ಯಾಂಕ್ ಖಾತೆಯ ಆಧಾರದ ಮೇಲೆ ತಂಡವು ತನಿಖೆ ಮುಂದುವರಿಸಿತು.
ವಹಿವಾಟಿನ ಐಪಿ ವಿಳಾಸ ಆಧರಿಸಿ ಈ ಇಬ್ಬರನ್ನು ಬಂಧಿಸಲಾಗಿದೆ. ಇಬ್ಬರೂ ಮಹಿಳೆಯೊಂದಿಗೆ ಸ್ನೇಹ ಬೆಳೆಸಲು ನಟ ಆರ್ಯ ಹೆಸರಿನಲ್ಲಿ ನಕಲಿ ಎಫ್‌ಬಿ ಖಾತೆಯನ್ನು ಆರಂಭಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಇವರಿಬ್ಬರ ಬಂಧನದ ನಂತರ, ತ್ವರಿತ ಕ್ರಮಕ್ಕಾಗಿ ಚೆನ್ನೈ ಪೊಲೀಸರಿಗೆ ಮತ್ತು ತನ್ನನ್ನು ನಂಬಿದ್ದಕ್ಕಾಗಿ ಅವರ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಓದಿ: You Marry Me ಎಂದ ಅಭಿಮಾನಿ: ಸೋನಾಕ್ಷಿ ಸಿನ್ಹಾ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?