ತಿರುಮಲ (ಆಂಧ್ರಪ್ರದೇಶ): ತಿರುಮಲದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ದೇವಾಲಯದ ಆಡಳಿತ ಮಂಡಳಿಯಾದ 'ತಿರುಮಲ ತಿರುಪತಿ ದೇವಸ್ಥಾನಂ' (ಟಿಟಿಡಿ) ಆನ್ಲೈನ್ ಟಿಕೆಟ್ ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 31 ರವರೆಗೆ ತಿಮ್ಮಪನ ವಿಶೇಷ ದರ್ಶನಕ್ಕಾಗಿ ನಿನ್ನೆ ಬೆಳಗ್ಗೆ 9 ಗಂಟೆಗೆ ಆನ್ಲೈನ್ ಟಿಕೆಟ್ ಬಿಡುಗಡೆ ಮಾಡಲಾಗಿತ್ತು. ಟಿಕೆಟ್ಗೆ 300 ರೂಪಾಯಿ ನಿಗದಿಪಡಿಸಲಾಗಿದೆ. ಕೇವಲ ಅರ್ಧ ಗಂಟೆಯಲ್ಲಿ 2.4 ಲಕ್ಷ ಜನರು ಬುಕ್ ಮಾಡಿದ್ದು, ಟಿಕೆಟ್ ಖಾಲಿಯಾಗಿದೆ.
ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ಕೋವಿಡ್ ಎರಡನೇ ಅಲೆ ಅಬ್ಬರಿಸಿದ ಪರಿಣಾಮ ತಿರುಪತಿಗೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಐದು ತಿಂಗಳುಗಳ ಬಳಿಕ ಶ್ರೀವಾರಿಯ ದರ್ಶನಕ್ಕಾಗಿ (ಸರ್ವದರ್ಶನ) ಉಚಿತ ಟಿಕೆಟ್ ನೀಡಲು ಟಿಟಿಡಿ ಆರಂಭಿಸಿತ್ತು. ಉಚಿತ ಟಿಕೆಟ್ ಪಡೆಯಲು ಮುಂಜಾನೆ 6 ಗಂಟೆಗೆ ಬಂದು ಭಕ್ತರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರು. ದಿನಕ್ಕೆ 2,000 ಟಿಕೆಟ್ಗಳನ್ನು ನೀಡುತ್ತಿದ್ದ ಟಿಟಿಡಿ ಭಕ್ತರ ಸಂಖ್ಯೆ ಹೆಚ್ಚಾದಂತೆ ಬಳಿಕ ಇದನ್ನು 8,000ಕ್ಕೆ ಹೆಚ್ಚಿಸಿತ್ತು.
ಇದನ್ನೂ ಓದಿ: ತಿರುಮಲ ತಿರುಪತಿ ದೇವಸ್ಥಾನಕ್ಕೆ 81 ಸದಸ್ಯರ ’ಜಂಬೂ‘ ಮಂಡಳಿ ರಚನೆ
ಆದರೆ, ದಿನದಿನಕ್ಕೂ ದೇಶದ ವಿವಿಧ ರಾಜ್ಯಗಳಿಂದ ಬರುವ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದ್ದು, ಕೊರೊನಾ ನಿಯಮಗಳು ಪಾಲಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಜನಸಂದಣಿ ನಿಯಂತ್ರಿಸಲು ಮುನ್ನೆಚ್ಚರಿಕಾ ಕ್ರಮವಾಗಿ ಟಿಟಿಡಿ ಸರ್ವದರ್ಶನ ಟಿಕೆಟ್ ಕೌಂಟರ್ ಮುಚ್ಚಿ, ಆನ್ಲೈನ್ ಟಿಕೆಟ್ ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಆದರೆ, ಆನ್ಲೈನ್ ಟಿಕೆಟ್ ಬಿಡುಗಡೆ ಮಾಡಿದ ಅರ್ಧ ಗಂಟೆಯಲ್ಲೇ ಟಿಕೆಟ್ ಖಾಲಿಯಾಗಿದ್ದು, ಬುಕಿಂಗ್ ಮಾಡಲು ಸಾಧ್ಯವಾಗದ ಜನರು ಯಾವುದೇ ಪೂರ್ವ ಪ್ರಕಟಣೆಯಿಲ್ಲದೆ ಟಿಟಿಡಿ ಆನ್ಲೈನ್ ಟಿಕೆಟ್ ಬಿಡುಗಡೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.