ಶ್ರೀಗಂಗಾನಗರ (ರಾಜಸ್ಥಾನ): ಇಂದು ಬೆಳಗ್ಗೆ 10 ಗಂಟೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಗು ಮತ್ತು ನಾಲ್ವರು ಮಹಿಳೆಯರು ಸೇರಿ ಆರು ಜನ ಸಾವನ್ನಪ್ಪಿರುವ ಘಟನೆ ಸೂರತ್‌ಗಢ್ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 62ರಲ್ಲಿ ನಡೆದಿದೆ.
ಸೂರತ್‌ಗಢ್ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ -62 ರಲ್ಲಿ ರಾಜಿಯಾಸರ್ನಿಂದ ಬರುತ್ತಿದ್ದ ಟ್ರಕ್ ಮತ್ತು ಜೀಪ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಜೀಪ್ ಮತ್ತು ಟ್ರಕ್‌ನ ಮುಂಭಾಗ ಜಖಂಗೊಂಡಿದ್ದವು. ಕೂಡಲೇ ಸ್ಥಳೀಯರ ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ರವಾನಿಸಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯ ಕೈಗೊಂಡಿತು. ಪೊಲೀಸರು ಆ್ಯಂಬುಲೆನ್ಸ್ ಮತ್ತು ಇತರ ಖಾಸಗಿ ವಾಹನಗಳ ಸಹಾಯದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಅಪಘಾತದಲ್ಲಿ ಮಗು ಮತ್ತು ನಾಲ್ವರು ಮಹಿಳೆಯರ ಹಾಗೂ ಚಾಲಕ ಸೇರಿ ಒಟ್ಟು ಆರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ವಾಹನದಿಂದ ಹೊರ ತೆಗೆಯಲು ಗಂಟೆಗಟ್ಟಲೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಅಪಘಾತದಲ್ಲಿ ಗಾಯಾಳುಗಳು ಮತ್ತು ಮೃತಪಟ್ಟವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಆಸ್ಪತ್ರೆಗೆ ದಾಖಲಿಸಲಾಗಿದ್ದ ಗಾಯಾಳು ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಪಘಾತದ ಬಳಿಕ ಹೆದ್ದಾರಿಯಲ್ಲಿ ಟಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ರಸ್ತೆ ಮಾರ್ಗವನ್ನು ಪ್ರಯಾಣಿಕರಿಗೆ ಸುಗಮಗೊಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಿಎಂ ಅಶೋಕ್ ಗೆಹ್ಲೋಟ್ ರಸ್ತೆ ಅಪಘಾತದ ಬಗ್ಗೆ ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜಿಯಾಸರ್ ಪ್ರದೇಶದ ಎನ್‌ಎಚ್ - 62 ರಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ತಿಳಿದ ನಂತರ ತುಂಬಾ ದುಃಖಿತರಾಗಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ. ದುಃಖಿತ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪ. ಈ ಕಷ್ಟದ ಸಮಯದಲ್ಲಿ ದೇವರು ಅವರಿಗೆ ಶಕ್ತಿ ನೀಡಲಿ. ಗಾಯಗೊಂಡವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.