ಅಗರ್ತಲಾ(ತ್ರಿಪುರಾ) : ಗಂಡನ ಜೊತೆ ಸುಃಖ ಸಂಸಾರ ನಡೆಸಬೇಕಿದ್ದ ಪತ್ನಿಯೊಬ್ಬಳು ವಿವಾಹೇತರ ಸಂಬಂಧ ಇರಿಸಿಕೊಂಡು ಸಿಕ್ಕಿಬಿದ್ದಿದ್ದಾಳೆ. ಈ ವೇಳೆ ಪತ್ನಿಯನ್ನ ಹಿಗ್ಗಾಮುಗ್ಗಾ ಥಳಿಸಿರುವ ಗಂಡ, ಪ್ರಿಯಕರನೊಂದಿಗೆ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸಿರುವ ಘಟನೆ ತ್ರಿಪುರಾದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತ್ರಿಪುರಾದ ಖೋವಾಯಿ ಜಿಲ್ಲೆಯಲ್ಲಿ ಮಧ್ಯವಯಸ್ಕ ಮಹಿಳೆಯೋರ್ವಳು ವಿವಾಹೇತರ ಸಂಬಂಧ ಹೊಂದಿದ್ದಳು. ಇದೇ ಶಂಕೆಯಲ್ಲಿ ಪತಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದರ ಜೊತೆಗೆ ಬಾಯ್ಫ್ರೆಂಡ್ ಜೊತೆ ಮದುವೆ ಮಾಡಿಸಿದ್ದಾನೆ. ಗ್ರಾಮಸ್ಥರ ಸಮ್ಮುಖದಲ್ಲಿ ಪರಸ್ಪರ ಮಾಲೆ ಬದಲಾಯಿಸಿದ್ದು, ಹಣೆಗೆ ಸಿಂಧೂರ ಸಹ ಹಚ್ಚಿಸಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಸೋನಾಚರಣ್ ಮಾಹಿತಿ ನೀಡಿದ್ದು, ಶನಿವಾರ ರಾತ್ರಿ ಈ ಪ್ರಕರಣ ನಡೆದಿದೆ. ಈಗಾಗಲೇ ಘಟನಾ ಸ್ಥಳಕ್ಕೆ ಪೊಲೀಸ್ ತಂಡ ರವಾನೆ ಮಾಡಿದ್ದು, ವಿಚಾರಣೆ ಆರಂಭಗೊಂಡಿದೆ ಎಂದಿದ್ದಾರೆ.
ಇದನ್ನೂ ಓದಿ: ಭೂಸೇನಾ ಮುಖ್ಯಸ್ಥರಾಗಿ ಲೆ. ಜನರಲ್ ಮನೋಜ್ ಪಾಂಡೆ ನೇಮಕ
ತನ್ನ ಸ್ನೇಹಿತರೊಂದಿಗೆ ಗ್ರಾಮದ ಹೊರವಲಯದ ಗದ್ದೆಗೆ ಕರೆದೊಯ್ದು ಆಕೆಯ ಮೇಲೆ ಅಮಾನುಷವಾಗಿ ಥಳಿಸಿದ್ದಾನೆ. ಇದರ ಬೆನ್ನಲ್ಲೇ ಆಕೆ ಪ್ರಜ್ಞೆ ತಪ್ಪಿದ್ದಾಳೆ. ಹೆಂಡತಿ ಜೊತೆ ಜೊತೆ ಸಿಕ್ಕಿಬಿದ್ದ ವ್ಯಕ್ತಿಗೂ ಥಳಿಸಲಾಗಿದೆ. ಇದರ ವಿಡಿಯೋ ಈಗ ವೈರಲ್ ಆಗಿದೆ. ಈ ವೇಳೆ ಆತನೊಂದಿಗೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡಲಾಗಿದ್ದು, ಹಣೆಗೆ ಸಿಂಧೂರ ಹಚ್ಚಿಸಿ, ಹಾರ ಬದಲಾಯಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಜ್ಞೆ ತಪ್ಪಿದ ಹೆಂಡ್ತಿಯನ್ನ ಆಸ್ಪತ್ರೆಗೆ ದಾಖಲಿಸಿದ ಗಂಡ : ಇಷ್ಟೆಲ್ಲ ಘಟನೆ ನಡೆದ ಬಳಿಕ ಗಂಡ ಖುದ್ದಾಗಿ ಹೆಂಡ್ತಿಯನ್ನ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಜೊತೆಗೆ ಆಕೆ ಜೊತೆ ರಾತ್ರಿಯಿಡಿ ಆಸ್ಪತ್ರೆಯಲ್ಲಿ ಕಾಲ ಕಳೆದಿದ್ದಾನೆ. ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಆಕೆಯನ್ನ ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು.