ಪಶ್ಚಿಮ ಮಿಡ್ನಾಪುರ (ಪಶ್ಚಿಮ ಬಂಗಾಳ): ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ)ದ ಮುಖಂಡರೊಬ್ಬರನ್ನು ಜನರು ಮರಕ್ಕೆ ಕಟ್ಟಿ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪು ಜಿಲ್ಲೆಯಲ್ಲಿ ನಡೆದಿದೆ.
ಥಳಿತಕ್ಕೊಳಗಾದ ಮುಖಂಡನನ್ನು ದಿಲೀಪ್ ಪಾತ್ರ ಎಂದು ಗುರುತಿಸಲಾಗಿದೆ. ಈತ ಟಿಎಂಸಿ ಕಾರ್ಮಿಕ ಘಟಕದ ನಾಯಕನಾಗಿದ್ದು, ಮಾಜಿ ಶಾಸಕಿ ಸೆಲಿಮಾ ಖಾತುನ್ ಅವರ ಹಿಂಬಾಲಕನೂ ಆಗಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಜನರಿಂದ ಹಣ ಪಡೆದಿದ್ದರು. ಹೀಗಾಗಿಯೇ ದಿಲೀಪ್ ಪಾತ್ರರನ್ನು ಗ್ರಾಮಸ್ಥರು ಹಿಡಿದು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ.
ಉದ್ಯೋಗ ಆಸೆಗೆ ಹಣ ನೀಡಿದವರಲ್ಲಿ ಸತ್ಯಪುರ ಪ್ರದೇಶದ ನಿವಾಸಿ ಕನೈಲಾಲ್ ಮುರ್ಮು ಎಂಬುವವರ ಸಂಬಂಧಿ ಒಬ್ಬರಾಗಿದ್ದು, ಎರಡೂವರೆ ವರ್ಷಗಳ ಹಿಂದೆ ದಿಲೀಪ್ ಪಾತ್ರ 5 ಲಕ್ಷ ರೂಪಾಯಿ ತೆಗೆದುಕೊಂಡಿದ್ದರು. ಆದರೆ, ಇದುವರೆಗೆ ಯಾವುದೇ ಉದ್ಯೋಗ ಕೊಡಿಸಿಲ್ಲ ಮತ್ತು ಹಣವನ್ನೂ ಹಿಂದಿರುಗಿಸಿಲ್ಲ ಎಂದು ಕನೈಲಾಲ್ ಮುರ್ಮು ಆರೋಪಿಸಿದ್ದಾರೆ.
ಇದನ್ನೂ ಓದಿ: ಫುಲ್ ಟೈಂ ಮೆಕ್ಯಾನಿಕ್, ಪಾರ್ಟ್ ಟೈಂ ಕಳ್ಳತನ.. ಇಬ್ಬರು ಆರೋಪಿಗಳ ಬಂಧನ