ಕೇರಳ: ವೆಂಗರಾ ಕ್ಷೇತ್ರದಿಂದ ಸ್ಪರ್ಧಿಸಿರುವ ತೃತೀಯಲಿಂಗಿ ಅನನ್ಯಾ ಕುಮಾರಿ ಅಲಕ್ಸ್ ವಿಧಾಸಭಾ ಚುನಾವಣಾ ಅಖಾಡಕ್ಕಿಳಿದಿರುವ ಮೊದಲ ತೃತೀಯಲಿಂಗಿಯಾಗಿದ್ದು, ತಮ್ಮನ್ನು ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಅನನ್ಯಾ ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪ್ರಮುಖ ವಿಷಯ ಎಂದರೆ ಯುಡಿಎಫ್‌ನ ಪಿ. ಕೆ. ಕುಂಜಲಿಕುಟ್ಟಿ ಮತ್ತು ಎಲ್‌ಡಿಎಫ್‌ನ ಪಿ. ಜೀಜಿಯಂತಹ ದೊಡ್ಡ ಸ್ಟಾರ್ ಅಭ್ಯರ್ಥಿಗಳ ವಿರುದ್ಧ ಇವರು ಕಣಕ್ಕಿಳಿದಿದ್ದಾರೆ.
ಅನನ್ಯಾ ರಾಜ್ಯದ ಮೊದಲ ತೃತೀಯಲಿಂಗಿ ರೇಡಿಯೋ ಜಾಕಿಯಾಗಿ ಹೆಸರು ಮಾಡಿ ಅದೆಷ್ಟೋ ಕಷ್ಟ ನೋವು ನಲಿವುಗಳನ್ನು ಅನುಭವಿಸಿದ್ದು, ಜೀವನದಲ್ಲಿ ಈಗ ಹೊಸ ಹೆಜ್ಜೆ ಇಡುತ್ತಿದ್ದಾರೆ. ಈ ಹೆಜ್ಜೆಯಲ್ಲಿ ಈ ಚುನಾವಣೆಯು ಮಹತ್ವದ್ದಾಗಿದೆ. ಪ್ರಚಾರದ ಸಮಯದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ಗೆಲುವು ಅಥವಾ ಸೋಲಿನ ವಿಷಯದ ಬಗ್ಗೆ ಆಲೋಚನೆ ಮಾಡುವುದಕ್ಕಿಂತ ತಮ್ಮ ಸಮುದಾಯವನ್ನು ಪ್ರತಿನಿಧಿಸುವ ಗುರಿಯನ್ನು ಅವರು ಹೊಂದಿದ್ದಾರೆ.
ನಾನು ಕೇವಲ ಜೀವಿಸುವ ಬದಲು ನನ್ನ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಬಯಸುತ್ತೇನೆ. ರಾಜಕೀಯ ಪ್ರವೇಶಿಸುವ ಉದ್ದೇಶ ತನ್ನ ಸಮುದಾಯದ ಪ್ರತಿನಿಧಿಯಾಗುವುದು. ಗೆದ್ದರೆ, ನಾಯಕತ್ವದಿಂದ ಅಂಚಿನಲ್ಲಿರುವ ಜನರ ಒಂದು ಭಾಗವಾಗಿ ಕೆಲಸ ಮಾಡಲು ಬಯಸುತ್ತೇನೆ ಎಂದು ಅನನ್ಯಾ ತಿಳಿಸಿದ್ದಾರೆ.
ಏಪ್ರಿಲ್ 6ರಂದು ಕೇರಳ ಮತದಾರರರು ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.