ಬಾಲಸೋರ್(ಒಡಿಶಾ): ಕೇಂದ್ರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರ ಕಾರನ್ನು ಓವರ್ಟೇಕ್ ಮಾಡಿದ ಆರೋಪದಲ್ಲಿ ಐವರು ಪ್ರವಾಸಿಗರನ್ನು ಭಾನುವಾರ ಬಾಲಸೋರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂತೋಷ್ ಶಾ ಎಂಬಾತ ತನ್ನ ಕುಟುಂಬದೊಂದಿಗೆ ಕೋಲ್ಕತಾದಿಂದ ಪಂಚಲೀಗೇಶ್ವರಕ್ಕೆ ಎರಡು ಕಾರುಗಳಲ್ಲಿ ತೆರಳುತ್ತಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಫೇಸ್ಬುಕ್ ಗೆಳೆತನ ತಂದ ಆಪತ್ತು: ಉಚಿತ ಗಿಫ್ಟ್ ಪಡೆಯಲು 39.73 ಲಕ್ಷ ರೂ. ಕಳೆದುಕೊಂಡ ಅಜ್ಜ !
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂತೋಷ್ ಶಾ '' ನಾವು ಬಸ್ತಾ ಪ್ರದೇಶದಲ್ಲಿ ಬರುತ್ತಿದ್ದಾಗ ಸೈರನ್ ಸದ್ದು ಕೇಳಿತು. ಆ್ಯಂಬುಲೆನ್ಸ್ ಎಂದು ತಿಳಿದು ನಾವು ವೇಗವನ್ನು ಕಡಿಮೆ ಮಾಡಿಕೊಂಡೆವು. ಆ ವಾಹನಗಳು ಮುಂದಕ್ಕೆ ಬಂದ ಮೇಲೆ ಅದು ಸಚಿವರ ಕಾರು ಎಂದು ಗೊತ್ತಾಯಿತು. ಆ ಕಾರು ಬೇರೆ ರಸ್ತೆಗೆ ಇಳಿದಾಗ ಆ ಕಾರನ್ನು ಓವರ್ಟೇಕ್ ಮಾಡಿದ್ದೆವು'' ಎಂದಿದ್ದಾರೆ.
ಕೆಲವು ಸಮಯದ ನಂತರ 20 ಕಿಲೋ ಮೀಟರ್ ದೂರ ತೆರಳಿದ ನಂತರ, ಜಲೇಶ್ವರ್ ಬಳಿಯ ಲಖನಾಥ್ ಟೋಲ್ ಗೇಟ್ ಬಳಿ ಬಸ್ತಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಸಂತೋಷ್ ಅವರ ಎರಡು ಕಾರುಗಳನ್ನು ಓವರ್ಟೇಕ್ ಮಾಡಿ ವಶಕ್ಕೆ ಪಡೆದಿದ್ದಾರೆ.
ಬಸ್ತಾ ಪೊಲೀಸ್ ಸ್ಟೇಷನ್ಗೆ ಕುಟುಂಬದವರನ್ನು ಕರೆದುಕೊಂಡು ಹೋಗಿ ಐದು ಗಂಟೆ ವಶಕ್ಕೆ ಪಡೆಯಲಾಗಿದೆ. ಇನ್ನೊಮ್ಮೆ ಓವರ್ಟೇಕ್ ಮಾಡುವುದಿಲ್ಲ ಎಂದು ಕ್ಷಮಾಪಣಾ ಪತ್ರ ಬರೆದುಕೊಟ್ಟ ನಂತರ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.