ಛಿಂದ್ವಾರಾ, ಮಧ್ಯಪ್ರದೇಶ: ಕೆಲವರು ತಮ್ಮ ಮಕ್ಕಳನ್ನು ಮೊದಲ ಬಾರಿಗೆ ತಬ್ಬಿಕೊಂಡರೆ, ಕೆಲವರು ಅನೇಕ ವರ್ಷಗಳ ನಂತರ ತಮ್ಮ ಕುಡಿಗಳನ್ನು ನೋಡಿ ಸಂತಸದಿಂದ ಕಣ್ಣೀರು ಸುರಿಸುತ್ತಿರುವ ಪ್ರಸಂಗವೊಂದು ಜೈಲಿನಲ್ಲಿ ಕಂಡು ಬಂದಿತು. ಇನ್ನು ಚಿಕ್ಕ ಮಕ್ಕಳು ತಮ್ಮ ತಂದೆಯ ಮಡಿಲಲ್ಲಿ ಕುಳಿತು ನಿರಾಳವಾಗಿದ್ದರು. ಈ ಮನಕಲುಕುವ ಕ್ಷಣಗಳು ಛಿಂದ್ವಾರಾ ಜಿಲ್ಲಾ ಕಾರಾಗೃಹದೊಳಗೆ ಕಂಡುಬಂದಿತು. ಛಿಂದ್ವಾರಾ ಜಿಲ್ಲಾ ಕಾರಾಗೃಹದ ಆಡಳಿತವು ಕೈದಿಗಳಿಗೆ ತಮ್ಮ ಮಕ್ಕಳನ್ನು ಭೇಟಿ ಮಾಡಲು ಕಾರ್ಯಕ್ರಮ ಆಯೋಜಿಸಿತ್ತು, ಅದಕ್ಕೆ ಸ್ಪರ್ಶ್ ಮೀಟ್ ಎಂದು ಹೆಸರಿಸಲಾಗಿತ್ತು.
ಪೋಷಕರು ಮಕ್ಕಳನ್ನು ಹೊಂದಿರುವುದು ಸಾಮಾನ್ಯ. ಕೆಲ ಸಂದರ್ಭದಲ್ಲಿ ಅಪರಾಧ ಅಥವಾ ಇತರ ಕಾರಣಗಳಿಂದ ಆ ಮಕ್ಕಳ ತಂದೆ ಜೈಲಿಗೆ ಹೋಗಬೇಕಾಗುತ್ತದೆ. ಆದರೆ ಅದರ ಭಾರವು ಅವರ ಮಕ್ಕಳು ಪಡೆಯುವ ಪ್ರೀತಿ ಮೇಲೆ ಬೀಳುತ್ತದೆ. ಹೀಗಾಗಿ ಜೈಲಿನಲ್ಲಿ ತಮ್ಮ ಮಕ್ಕಳನ್ನು ಭೇಟಿ ಮಾಡುವ ಅವಕಾಶವೊಂದನ್ನು ಜೈಲಿನ ಆಡಳಿತ ಅಧಿಕಾರಿಯೊಬ್ಬರು ಕಲ್ಪಿಸಿದ್ದಾರೆ. ಈ ವಿಶಿಷ್ಟ ಪ್ರಯೋಗಕ್ಕೆ ‘ಸ್ಪರ್ಶ ಸಭೆ’ ಕಾರ್ಯಕ್ರಮ ಎಂದು ಹೆಸರಿಸಲಾಗಿದೆ. ಪ್ರಯೋಗಾರ್ಥವಾಗಿ ಸುಮಾರು 70 ಮಕ್ಕಳು ತಮ್ಮ ತಂದೆಯರನ್ನು ಭೇಟಿಯಾಗಿ ಪ್ರೀತಿ ಹಂಚಿಕೊಂಡರು. ಜೈಲಿನಲ್ಲಿ ಸ್ಪರ್ಶ ಸಭೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಜೈಲು ಅಧೀಕ್ಷಕ ಯಜುವೇಂದ್ರ ವಾಘಮಾರೆ ತಿಳಿಸಿದ್ದಾರೆ.
3ರಿಂದ 13 ವರ್ಷದೊಳಗಿನ ಮಕ್ಕಳಿಗೆ ಜೈಲಿಗೆ ಪ್ರವೇಶ: ಜಿಲ್ಲಾ ಕಾರಾಗೃಹದ ಆಡಳಿತ ಮಂಡಳಿಯು 3 ವರ್ಷದಿಂದ 13 ವರ್ಷದ ಮಕ್ಕಳಿಗೆ ತಂದೆಯನ್ನು ಭೇಟಿಯಾಗಲು ಜೈಲಿನೊಳಗೆ ಎಂಟ್ರಿ ನೀಡಿತ್ತು. ಎಲ್ಲ ಮಕ್ಕಳು ತಮ್ಮ ತಂದೆಗಳನ್ನ ಭೇಟಿಯಾಗಲು ವಿವಿಧ ರೀತಿಯಲ್ಲಿ ಉಡುಗೊರೆಗಳೊಂದಿಗೆ ಜೈಲು ತಲುಪಿದ್ದರು. ಪ್ರಯೋಗಾರ್ಥವಾಗಿ ಈ ಸಭೆಯನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮ ಯಶಸ್ವಿಯಾದರೆ ತಿಂಗಳಿಗೊಮ್ಮೆ ಮಕ್ಕಳು ತಂದೆಯೊಂದಿಗೆ ಸ್ವಲ್ಪ ಸಮಯ ಕಾಲ ಕಳೆಯಬಹುದೆಂದು ಜೈಲು ಅಧೀಕ್ಷಕರು ತಿಳಿಸಿದರು.
ಜೈಲಿನಲ್ಲಿ ಮನೆಯಂತಹ ವಾತಾವರಣ ನಿರ್ಮಾಣ: ಸಾಮಾನ್ಯವಾಗಿ ಜೈಲಿನ ಹೆಸರು ಕೇಳಿದರೆ ಜನರ ಮನದಲ್ಲಿ ಭಯ ಹುಟ್ಟುತ್ತದೆ. ಚಿಕ್ಕ ಮಕ್ಕಳಿಗೆ ಜೈಲು ಅನುಭವವಾಗಬಾರದು. ಹಾಗಾಗಿ ಜೈಲಿನೊಳಗೆ ಮನೆಯಂತಹ ವಾತಾವರಣ ನಿರ್ಮಾಣವಾಗಿತ್ತು. ಮಕ್ಕಳು ಪಿಕ್ ನಿಕ್ನಂತೆ ಜೈಲು ತಲುಪಿದ್ದರು. ವರ್ಣರಂಜಿತ ಬಲೂನುಗಳೊಂದಿಗೆ, ಜೈಲಿನ ಒಳಗಿನ ನೋಟವು ಮಕ್ಕಳು ವಿಹಾರ ತಾಣವನ್ನು ತಲುಪಿದಂತೆಯೇ ಇತ್ತು. ಕೈದಿಗಳು ಜೈಲಿನ ಸಮವಸ್ತ್ರದ ಬದಲಿಗೆ ಸರಳವಾದ ಬಟ್ಟೆಗಳನ್ನು ಧರಿಸಿದ್ದರು ಮತ್ತು ಮನೆಯಂತಹ ವಾತಾವರಣವನ್ನು ಸೃಷ್ಟಿಸಲು ಎಲ್ಲರೂ ತೆರೆದ ಸಭಾಂಗಣದಲ್ಲಿ ಒಟ್ಟಿಗೆ ಕುಳಿತಿದ್ದರು.
ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬರು ಮಾತನಾಡಿ, ಎರಡೂವರೆ ವರ್ಷಗಳಿಂದ ಜೈಲಿನಲ್ಲೇ ಮಕ್ಕಳ ದರ್ಶನಕ್ಕೆ ಹಂಬಲಿಸುತ್ತಿದ್ದೆ. ಜೈಲು ನಿರ್ವಹಣೆಯ ಈ ಕಾರ್ಯಕ್ರಮದಲ್ಲಿ ತನ್ನ ಉದ್ದೇಶ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದರು. ಅವರು ಐದು ವರ್ಷಗಳ ನಂತರ ತಮ್ಮ ಮಗಳನ್ನು ಭೇಟಿ ಮಾಡಿ ಖುಷಿ ಪಟ್ಟರು. ಮಕ್ಕಳು ತಮ್ಮ ತಂದೆಯನ್ನು ತಲುಪಿದ ತಕ್ಷಣ ರೋಮಾಂಚಿತಗೊಂಡರು. ಯಾರೋ ಒಬ್ಬರು ಮಗುವನ್ನು ತಬ್ಬಿಕೊಳ್ಳುತ್ತಿದ್ದರು ಮತ್ತು ಮತ್ತೊಬ್ಬರು ತಮ್ಮ ಮಗುವಿನ ಹಣೆಗೆ ಮುತ್ತಿಟ್ಟು ಅಳುತ್ತಿದ್ದ ದೃಶ್ಯ ಕಂಡು ಬಂತು. ನಂತರ ಎಲ್ಲಾ ಮಕ್ಕಳು ತಮ್ಮ ತಂದೆಯೊಂದಿಗೆ ಕುಳಿತು ಊಟ ಮಾಡಿದ ಕ್ಷಣ ಎಲ್ಲರನ್ನು ಯಾವುದೋ ಲೋಕಕ್ಕೆ ಕರೆದೊಯ್ದಂತಿತ್ತು. ಇನ್ನು ಈ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಕೈದಿಗಳು ಜೈಲಿನ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಓದಿ: Beach tragedy: ಮುಂಬೈನ ಮಾರ್ವೆ ಬೀಚಲ್ಲಿ ಈಜಾಡುವಾಗ ಮೂವರು ಮಕ್ಕಳು ನೀರುಪಾಲು ಪ್ರಕರಣ.. ಮೃತದೇಹಗಳು ಪತ್ತೆ