ಕಡಲೂರು(ತಮಿಳುನಾಡು): 18 ವರ್ಷಗಳ ಹಿಂದಿನ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಲೂರು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿಶೇಷ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ.
ಈ ಕೃತ್ಯದಲ್ಲಿ ಭಾಗಿಯಾಗಿದ್ದ ಯುವತಿ ತಂದೆ ಮತ್ತು ಸಹೋದರರನ್ನೊಳಗೊಂಡಂತೆ 13 ಮಂದಿಗೆ ಶಿಕ್ಷೆಯಾಗಿದೆ. ಓರ್ವ ಅಪರಾಧಿಗಳಿಗೆ ಮರಣದಂಡನೆ, ಕೃತ್ಯಕ್ಕೆ ಸಹಕರಿಸಿದ ಮಾಜಿ ಡಿವೈಎಸ್ಪಿ, ಇನ್ಸ್ಪೆಕ್ಟರ್ ಸೇರಿದಂತೆ 12 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಯುವತಿ ಸಹೋದರ ಮರುದು ಪಾಂಡಿಯನ್ ಅವರಿಗೆ 4.65 ಲಕ್ಷ ರೂ. ದಂಡ ವಿಧಿಸಿದೆ.
ಪ್ರಕರಣ ಹಿನ್ನೆಲೆ..
ಕಡಲೂರು ಜಿಲ್ಲೆಯ ಕುಪ್ಪನಾಥಂನ ಪುತ್ತು ಕಾಲೋನಿಯ ದಲಿತ ಸಮುದಾಯಕ್ಕೆ ಸೇರಿದ ಎಸ್. ಮುರುಗೇಶನ್(25) ಹಾಗೂ ಮೇಲ್ಜಾತಿಗೆ (ವನ್ನಿಯಾರ್ ಸಮುದಾಯಕ್ಕೆ) ಸೇರಿದ ಅದೇ ಊರಿನ ಡಿ ಕನ್ನಗಿ (22) ಎಂಬ ಯುವತಿ ಪರಸ್ಪರ ಪ್ರೀತಿಸಿದ್ದರು. ಪ್ರೇಮಿಗಳು ಯಾರಿಗೂ ತಿಳಿಸದೆ ಮೇ 5, 2003 ರಂದು, ಕಡಲೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿ, ಕಣ್ತಪ್ಪಿಸಿಕೊಂಡಿದ್ದರು. ಬಳಿಕ ಮುರುಗೇಶನ್ ಪತ್ನಿ ಕನ್ನಗಿಯನ್ನು ಅವರ ಸಂಬಂಧಿಕರ ಮನೆಯಾದ ವಿಲ್ಪುರಂ ಜಿಲ್ಲೆಯ ಮೂಂಗಿಲ್ತುರೈಪಟ್ಟಿಯಲ್ಲಿ(ಈಗ ಕಲ್ಲಕುರಿಚಿ ಜಿಲ್ಲೆಯಲ್ಲಿರುವ) ಇರಿಸಿದರು.
ಮುರುಗೇಶನ್ ಕಡಲೂರು ಜಿಲ್ಲೆಯ ಶ್ರೀಮುಷ್ಣಂ ಬಳಿಯ ವಣ್ಣಗುಡಿಕಾಡು ಎಂಬಲ್ಲಿರುವ ಇನ್ನೊಬ್ಬ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದರು. ಆಗ ದಂಪತಿ ಬೆನ್ನಟ್ಟಿದ ಯುವತಿ ಪೋಷಕರು ಇಬ್ಬರನ್ನೂ ಹಳ್ಳಿಗೆ ಕರೆತಂದು ಥಳಿಸಿ, ವಿಷ ಕುಡಿಸಿ ಹತ್ಯೆಗೈದರು. ಬಳಿಕ ಇಬ್ಬರ ಮೃತದೇಹವನ್ನು ಪ್ರತ್ಯೇಕವಾಗಿ ಸುಡಲಾಗಿತ್ತು.
ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರ ಹಿಂದೇಟು
ಯುವಕನ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು ಎನ್ನಲಾಗ್ತಿದೆ. ಈ ವಿಷಯ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಎಫ್ಐಆರ್ ದಾಖಲಿಸಿದ್ದರು. ಆದರೆ, ಪೊಲೀಸರು ಯುವಕ-ಯುವತಿ ಇಬ್ಬರ ಕುಟುಂಬಸ್ಥರನ್ನೂ ಬಂಧಿಸಿದ್ದರು. ಇದರಿಂದಾಗಿ ಮರ್ಯಾದಾ ಹತ್ಯೆ ಎಂದು ತನಿಖೆ ಮಾಡಲು ಪೊಲೀಸರು ಹಿಂದೇಟು ಹಾಕಿದರು. ಮಾನವ ಹಕ್ಕುಗಳ ಕಾರ್ಯಕರ್ತರು, ಸಿಪಿಐ(ಎಂ) ಸೇರಿ ಹಲವಾರು ಸಂಘಟನೆಗಳು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಬ್ಬರು ಪೊಲೀಸ್ ಅಧಿಕಾರಿಗಳು ಕೃತ್ಯದಲ್ಲಿ ಭಾಗಿ..
ವಕೀಲ ಪಿ.ರತ್ನಂ ಅವರ ನಿರಂತರ ಹೋರಾಟದಿಂದಾಗಿ 2004 ರಲ್ಲಿ ಮದ್ರಾಸ್ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಸತತ ಐದು ವರ್ಷಗಳ ಕಾಲ ತನಿಖೆ ನಡೆಸಿದ ಸಿಬಿಐ 2009 ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದರಲ್ಲಿ ಜಾತಿ ತಾರತಮ್ಯದಿಂದಾಗಿ ಕನ್ನಗಿಯ ಕುಟುಂಬಸ್ಥರು ಈ ಇಬ್ಬರನ್ನು ಹತ್ಯೆಗೈದಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು.
ವಿರುಧಾಚಲಂ ಸಬ್ ಇನ್ಸ್ಪೆಕ್ಟರ್ ತಮಿಝ್ಮಾರನ್ ಮತ್ತು ನಂತರ ಬಂದ ಸೆಲ್ಲಮುತ್ತು ಅಪರಾಧಿಗಳಿಗೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಲಾಯಿತು. ಕಡಲೂರು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬಂದ ಹಿನ್ನೆಲೆ, ಎಸ್‌ಸಿ-ಎಸ್‌ಟಿ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪೊಲೀಸ್ ಅಧಿಕಾರಿ ಜೋಡಿ ಕೊಲೆಗೆ ಕೈ ಜೋಡಿಸಿದ್ದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ತಲಾ ಒಂದೂವರೆ ಲಕ್ಷ ರೂ. ದಂಡ ವಿಧಿಸಲಾಗಿದೆ.
ಪ್ರಕರಣದಿಂದ ಮುರುಗೇಶನ್ ಕುಟುಂಬಸ್ಥರು ಖುಲಾಸೆ
ಮುರುಗೇಶನ ಇಬ್ಬರು ಸಂಬಂಧಿಕರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ. ಅಪರಾಧಿಗಳನ್ನು ಮತ್ತೆ ಕಡಲೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ. ಈ ತೀರ್ಪು, ತಮಿಳುನಾಡಿನಲ್ಲಿ ಮತ್ತೆ ಇಂಥ ದುರ್ಘಟನೆಗಳು ಮರುಕಳಿಸದಂತೆ ಇತರರಿಗೆ ಎಚ್ಚರಿಕೆಯ ಗಂಟೆಯಾಗಿರುತ್ತದೆ. ಮರ್ಯಾದಾ ಹತ್ಯೆ ಇಲ್ಲಿಗೆ ಕೊನೆಯಾಗಲಿ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಮಸಾಜ್ ಸೆಂಟರ್ ಮಾಲೀಕನಿಂದ ಲೈಂಗಿಕ ಕಿರುಕುಳ: ಆರೋಪಿಯ ಬಂಧನ