ಚೆನ್ನೈ (ತಮಿಳುನಾಡು): ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷವು ಜಯಲಲಿತಾ ಅವರ ಪಕ್ಷವಾಗಿ ಉಳಿದುಕೊಂಡಿಲ್ಲ, ದುರದೃಷ್ಟವಶಾತ್ ಇದು ಪ್ರಧಾನಿ ನರೇಂದ್ರ ಮೋದಿಯ ಗುಲಾಮನಾಗಿ ಮಾರ್ಪಟ್ಟಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಚೆನ್ನೈನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಜಯಲಲಿತಾ ಅವರು ಎಐಎಡಿಎಂಕೆ ಪಕ್ಷವನ್ನು ಯಾವಾಗಲೂ ಬಿಜೆಪಿಯಿಂದ ದೂರವಿರಿಸಿದ್ದರು. ಆದರೆ ಇದೀಗ ಎಐಎಡಿಎಂಕೆ ಪಕ್ಷವು ನರೇಂದ್ರ ಮೋದಿಯ ಗುಲಾಮನಾಗಿ ಮಾರ್ಪಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ವಿಧಾನಸಭಾ ಚುನಾವಣೆ ಹಿನ್ನೆಲೆ ಟಿಟಿವಿ ದಿನಕರನ್ ಅವರ ಅಮ್ಮಾ ಮಕ್ಕಳ ಮುನ್ನೇತ್ರ ಕಳಗಂ (ಎಎಂಎಂಕೆ) ಜೊತೆ ಮಾಡಿಕೊಂಡ ಮೈತ್ರಿಯನ್ನು ಸಮರ್ಥಿಸಿಕೊಂಡ ಓವೈಸಿ, ಡಿಎಂಕೆ ಮತ್ತು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ತಮಿಳುನಾಡಿನ ಎಲ್ಲ ಕ್ಷೇತ್ರಗಳಿಗೂ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮತ ಎಣಿಕೆ ಮೇ 2 ರಂದು ನಡೆಯಲಿದೆ. 234 ಕ್ಷೇತ್ರಗಳ ಪೈಕಿ ಎಐಎಂಐಎಂ ಪಕ್ಷ ಎಎಂಎಂಕೆ ಜೊತೆ ಮೈತ್ರಿ ಮಾಡಿಕೊಂಡು ವಿನಿಯಂಬಾಡಿ, ಕೃಷ್ಣಗಿರಿ ಮತ್ತು ಶಂಕರಪುರಂ ಮೂರು ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಎಐಎಡಿಎಂಕೆ ಭಾರತೀಯ ಜನತಾ ಪಾರ್ಟಿ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದರೆ, ಡಿಎಂಕೆ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.