ಚೆನ್ನೈ: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿನ 5,151 ಹೆಕ್ಟೇರ್ ಪ್ರದೇಶದ ಕಜುವೇಲಿ ಪರಿಸರ ಇನ್ನು ಮುಂದೆ ರಾಜ್ಯದ 16ನೇ ಪಕ್ಷಿಧಾಮವಾಗಲಿದೆ ಎಂದು ಅಲ್ಲಿನ ಸರ್ಕಾರ ಮಂಗಳವಾರ ಘೋಷಿಸಿದೆ.
1972 ರ ವನ್ಯಜೀವಿ(ರಕ್ಷಣೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ವಿಲ್ಲುಪುರಂ ಜಿಲ್ಲೆಯ ವನೂರ್ ಮತ್ತು ಮರಕ್ಕನಂ ತಾಲೂಕುಗಳಲ್ಲಿ ನೆಲೆಗೊಂಡಿರುವ ಕಜುವೇಲಿ ಪ್ರದೇಶವನ್ನು ಈಗ 'ಕಜುವೇಲಿ ಜೌಗು ಪ್ರದೇಶ ಪಕ್ಷಿಧಾಮ'ವಾಗಿ ರೂಪಿಸಲಾಗುವುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಪ್ರದೇಶವು ವನ್ಯಜೀವಿಗಳ, ವಿವಿಧ ಪ್ರಕಾರದ ಪಕ್ಷಿಗಳ ವಾಸಸ್ಥಾನವಾಗಿದೆ. ಅಲ್ಲದೇ, ಇದು ಹೆಚ್ಚಿನ ಹಸಿರು ಪರಿಸರವನ್ನು ಹೊಂದಿದ್ದು, ಇದನ್ನು ಪ್ರಚಾರ ಮಾಡುವ ಮತ್ತು ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಪಕ್ಷಿಧಾಮವನ್ನಾಗಿ ರೂಪಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಬದುಕಿದೆಯಾ ಬಡಜೀವ.. ಪ್ರಪಾತಕ್ಕೆ ಬೀಳಬೇಕಾದ ಬಸ್ ಅದೃಷ್ಟವಶಾತ್ ಪಾರು.. 20 ಮಂದಿ ಬಚಾವ್..
ಕಜುವೇಲಿ ಉಪ್ಪುನೀರಿನ ಸರೋವರದಿಂದ ಕೂಡಿದ್ದು, ಜೌಗು ಪ್ರದೇಶವಾಗಿದೆ. ಇದು ನಡುಕುಪ್ಪಂ, ಸೆಯ್ಯಂಕುಪ್ಪಂ, ಚೆಟ್ಟಿಕುಪ್ಪಂ, ಅನುಮಂದೈ, ಉರಣಿ, ಕೀಲ್ಪುತುಪಟ್ಟು ಮತ್ತು ಕೂನಿಮೇಡು ಸೇರಿದಂತೆ ಹಲವು ಗ್ರಾಮಗಳಿಗೆ ಹೊಂದಿಕೊಂಡಿದೆ.
ಕಜುವೇಲಿ ಪರಿಸರ ಪ್ರದೇಶ ಚೆನ್ನೈನ ಪ್ರಮುಖ ನಗರವಾದ ತಾಂಬರಂನಿಂದ ಸುಮಾರು 55 ಕಿಲೋಮೀಟರ್ ದೂರದಲ್ಲಿದೆ. ರಾಜ್ಯದಲ್ಲಿ ಪುಲಿಕಾಟ್ ಮತ್ತು ಕರಿಕಿಲಿ ಸೇರಿದಂತೆ ಒಟ್ಟು 15 ಪಕ್ಷಿಧಾಮಗಳಿವೆ. ಇದೀಗ ಕಜುವೇಲಿ ರಾಜ್ಯದ 16ನೇ ಪಕ್ಷಿಧಾಮವಾಗಲಿದೆ.