ಚೆನ್ನೈ(ತಮಿಳುನಾಡು): ಇಂದು ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬ. ಈ ಸಂಭ್ರಮದಲ್ಲಿರುವ ತಮಿಳುನಾಡು ಬಿಜೆಪಿ ಘಟಕ ಮಹತ್ವದ ನಿರ್ಧಾರ ಕೈಗೊಂಡಿದೆ. ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟುವ ಮಕ್ಕಳಿಗೆ ಚಿನ್ನದ ಉಂಗುರ ನೀಡಲು ನಿರ್ಧರಿಸಿದೆ.
ಚೆನ್ನೈನಲ್ಲಿರುವ ಆರ್ಎಸ್ಆರ್ಎಂ ಆಸ್ಪತ್ರೆಯಲ್ಲಿ ಇಂದು ಹುಟ್ಟುವ ಎಲ್ಲ ಮಕ್ಕಳಿಗೆ 2 ಗ್ರಾಂ. ನಷ್ಟು ತೂಕದ ಚಿನ್ನದ ಉಂಗುರ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಮಿಳುನಾಡು ಬಿಜೆಪಿ ತಿಳಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಈ ಆಸ್ಪತ್ರೆಯಲ್ಲಿಂದು 17ರಿಂದ 20ಮಕ್ಕಳು ಜನ್ಮ ತಾಳುವ ಸಾಧ್ಯತೆ ದಟ್ಟವಾಗಿದೆ.
ಇದೇ ವಿಚಾರವಾಗಿ ಮಾತನಾಡಿರುವ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ರಾಜ್ಯ ಖಾತೆ ಸಚಿವ ಎಲ್ ಮುರುಗನ್, ತಮಿಳುನಾಡು ಬಿಜೆಪಿ ಘಟಕ ಈ ನಿರ್ಧಾರ ಕೈಗೊಂಡಿದ್ದು, ಅದಕ್ಕೋಸ್ಕರ ನಾವು RSRM ಆಸ್ಪತ್ರೆ ಆಯ್ಕೆ ಮಾಡಲಾಗಿದೆ. ಇಲ್ಲಿ ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದಂದು ಜನಿಸುವ ಎಲ್ಲ ಮಕ್ಕಳಿಗೆ ಚಿನ್ನದ ಉಂಗುರ ಉಡುಗೊರೆಯಾಗಿ ನೀಡಲಾಗುವುದು ಎಂದರು.
ಇದರ ಜೊತೆಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ವಿಧಾನಸಭೆ ಕ್ಷೇತ್ರ ಕೊಳತ್ತೂರು ಕ್ಷೇತ್ರದಲ್ಲಿ 720 ಕೆಜಿ ಮೀನು ವಿತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಈ ಕ್ಷೇತ್ರದ ಜನರಿಗೆ ಮೀನು ವಿತರಣೆ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಬಂದ ಆಫ್ರಿಕನ್ ಅತಿಥಿಗಳು: ಮೋದಿ ಜನ್ಮದಿನದಂದು ಚಿರತೆಗಳಿಗೆ ಸ್ವಾಗತ
ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ನಮೋ: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲಿದ್ದು, ಇಲ್ಲಿ ಆಫ್ರಿಕಾದಿಂದ ಬಂದಿರುವ 8 ಚೀತಾಗಳನ್ನು ಕಾಡಿಗೆ ಬಿಡಲಿದ್ದಾರೆ. ದೇಶದ ಪ್ರಧಾನಿ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ ಬಿಜೆಪಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಅದರಲ್ಲಿ ರಕ್ತಶಿಬಿರ, ಉಚಿತ ವೈದ್ಯಕೀಯ ಶಿಬಿರ ಸಹ ಸೇರಿಕೊಂಡಿವೆ.
ವಿಶ್ವನಾಯಕನಿಗೆ ಶುಭಾಶಯಗಳ ಮಹಾಪೂರ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.