ಬಿರ್ಭುಮ್ (ಪಶ್ಚಿಮ ಬಂಗಾಳ): ಬಾಂಬ್ ಸ್ಫೋಟ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಬಿರ್ಭುನ್ ಜಿಲ್ಲೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಇಬ್ಬರು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಮೃತರನ್ನು ಲಾಲ್ಟು ಶೇಖ್ ಮತ್ತು ನ್ಯೂಟನ್ ಶೇಖ್ ಎಂದು ಗುರುತಿಸಲಾಗಿದೆ. ಈಗಾಗಲೇ ಪ್ರಮುಖ ಆರೋಪಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿರ್ಭುಮ್ ಜಿಲ್ಲೆಯ ಮಾರ್ಗಗ್ರಾಮ್‌ನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಟಿಎಂಸಿ ಕಾರ್ಯಕರ್ತರಾದ ನ್ಯೂಟನ್ ಮತ್ತು ಲಾಲ್ಟು ಶೇಖ್ ಮೇಲೆ ಬಾಂಬ್ ಎಸೆದು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ, ಕಾಂಗ್ರೆಸ್ ದುಷ್ಕರ್ಮಿಗಳು ಈ ಬಾಂಬ್ ಎಸೆದಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಸಿಎಂ ಭೇಟಿ ನೀಡಿದ ವಾರದಲ್ಲಿ ಘಟನೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿರ್ಭುಮ್ ಜಿಲ್ಲೆಗೆ ಭೇಟಿ ನೀಡಿದ ಒಂದು ವಾರದ ನಂತರ ಈ ಬಾಂಬ್ ಸ್ಫೋಟದ ಘಟನೆ ನಡೆದಿದೆ. ಮೃತ ಲಾಲ್ಟು ಶೇಖ್ ಅವರನ್ನು ಟಿಎಂಸಿ ಪಂಚಾಯತ್ ಮುಖ್ಯಸ್ಥ ಭುಟ್ಟೋ ಶೇಖ್ ಸಹೋದರ ಎಂದು ಹೇಳಲಾಗಿದೆ. ಶನಿವಾರ ರಾತ್ರಿ ನಡೆದ ಬಾಂಬ್ ಎಸೆದಾಗ ಲಾಲ್ಟು ಶೇಖ್ ಮತ್ತು ಈತನ ಸಹಚರ ನ್ಯೂಟನ್ ಶೇಖ್ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.
ನಂತರ ಇಬ್ಬರನ್ನು ಆಸ್ಪತ್ರೆಗೆ ರವಾನಿಸಿತ್ತು. ಆದರೆ, ನಿನ್ನೆ ರಾತ್ರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗಲೇ ನ್ಯೂಟನ್ ಶೇಖ್ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದರು. ಮತ್ತೊಂದೆಡೆ, ಗಂಭೀರವಾಗಿ ಗಾಯಗೊಂಡಿದ್ದ ಲಾಲ್ಟು ಶೇಖ್ ರಾಮ್‌ಪುರಹತ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಜಧಾನಿ ಕೋಲ್ಕತ್ತಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಲಾಲ್ಟು ಶೇಖ್ ಕೂಡ ಇಂದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಆರು ಜನ ಆರೋಪಿಗಳ ಬಂಧನ: ಈ ಬಾಂಬ್ ಸ್ಫೋಟ ಪ್ರಕರಣ ಮತ್ತು ಟಿಎಂಸಿ ಕಾರ್ಯಕರ್ತರ ಸಾವು ಪ್ರಕರಣದ ಸಂಬಂಧ ಆರು ಜನರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಸುಜಾವುದ್ದೀನ್ ಶೇಖ್ ಎಂಬಾತ ಮತ್ತು ಈತನ ಇಬ್ಬರು ಪುತ್ರ ಸೇರಿದ್ದಾರೆ. ಈ ಘಟನೆಯ ನಂತರ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ್ತೊಂಡೆದೆ, ಇದೊಂದು ಪೂರ್ವ ಯೋಜಿತ ದಾಳಿಯಾಗಿದ್ದು, ಈ ಘಟನೆಯಲ್ಲಿ ಒಟ್ಟು 10-12 ಜನ ದುಷ್ಕರ್ಮಿಗಳು ಭಾಗಿಯಾಗಿದ್ದಾರೆ ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ.
ಇನ್ನು, ಪಶ್ಚಿಮ ಬಂಗಾಳದಲ್ಲಿ ಆಗ್ಗಾಗ್ಗೆ ರಾಜಕೀಯ ಗಲಾಟೆಗಳು ನಡೆಯುತ್ತಲೇ ಇರುತ್ತವೆ. ಇಷ್ಟೇ ಅಲ್ಲ, ಕೆಲವೊಮ್ಮೆ ರಾಜಕೀಯ ವಿರೋಧಿಗಳ ಮೇಲೆ ಕಚ್ಛಾ ಬಾಂಬ್ಗಳು ಎಸೆದು ದೃಷ್ಕೃತ್ಯ ಎಸಗಿದ ಘಟನೆಗಳು ವರದಿಯಾಗುತ್ತಿವೆ. ಬಿರ್ಭುನ್ ಜಿಲ್ಲೆಯ ಈ ಬಾಂಬ್ ಸ್ಫೋಟ ಘಟನೆಗೂ ಮುನ್ನ ದಕ್ಷಿಣ 24 ಪರಗಣ ಜಿಲ್ಲೆಯಲ್ಲೂ ಇಂತಹದ್ದೆ ಘಟನೆ ಜರುಗಿದೆ. ಇಲ್ಲಿನ ಬಸಂತಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡಿದ್ದರು. ಅಲ್ಲದೇ, ಕ್ಯಾನಿಂಗ್ ಎಂಬಲ್ಲಿ ಕೆಲ ಬಾಂಬ್‌ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದರು. ಕಳೆದ ವರ್ಷ, ರಾಮ್‌ಪುರಹತ್‌ನಲ್ಲಿ ಟಿಎಂಸಿ ಪಂಚಾಯತ್ ನಾಯಕರೊಬ್ಬರ ಮೇಲೆ ಬಾಂಬ್‌ಗಳನ್ನು ಎಸೆದ ಘಟನೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: ಕುಟುಂಬಸ್ಥರ ಮುಂದೆಯೇ ಬಿಜೆಪಿ ಮುಖಂಡನ ಹತ್ಯೆಗೈದ ನಕ್ಸಲರು